ಭಾರತ ವಿಶ್ವದ ಅತ್ಯಾಚಾರಗಳ ರಾಜಧಾನಿ: ರಾಹುಲ್ ಗಾಂಧಿ

ತಿರುವನಂತಪರುಂ: ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎನ್ನಲಾಗುತ್ತಿದೆ ಎಂದು ಎಐಸಿಸಿ ಮಾಜಿ ಅದ್ಯಕ್ಷ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇರಳದ ವಯನಾಡಿನಲ್ಲಿ ಮಾತನಾಡಿದ ಅವರು, ಭಾರತವನ್ನು ವಿಶ್ವದ ಅತ್ಯಾಚಾರಗಳ ರಾಜಧಾನಿ ಎಂದು ಕರೆಯಲಾಗುತ್ತಿದೆ. ತನ್ನ ನೆಲದ ಹೆಣ್ಣುಮಕ್ಕಳು ನೋಡಿಕೊಳ್ಳಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಯನ್ನು ವಿದೇಶಿ ರಾಷ್ಟ್ರಗಳು ಕೇಳುತ್ತಿವೆ. ಉತ್ತರ ಪ್ರದೇಶ ಬಿಜೆಪಿಯ ಶಾಸಕರೊಬ್ಬರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಗುಡುಗಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾಚಾರ, ದ್ವೇಷ ಹರಡುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಅವರನ್ನು ಥಳಿಸುವುದು, ಧ್ವನಿಯನ್ನು ಹತ್ತಿಕ್ಕುವ ಬೆಳವಣಿಗೆ ದೇಶದಲ್ಲಿ ಉಂಟಾಗಿದೆ. ಬುಡಕಟ್ಟು ಜನಾಂಗದವರ ಮೇಲೆ ದೌರ್ಜನ್ಯ ಎಸಗಿ ಅವರ ಭೂಮಿಯನ್ನು ಕಸಿದುಕೊಳ್ಳಲಾಗುತ್ತದೆ. ಹಿಂಸಾಚಾರದಲ್ಲಿ ಈ ನಾಟಕೀಯ ಪ್ರವೃತ್ತಿ ಹೆಚ್ಚುವುದಕ್ಕೆ ಒಂದು ಬಲವಾದ ಕಾರಣವಿದೆ ಎಂದು ರಾಹುಲ್ ಗಾಂಧಿ, ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಸಾಮಾನ್ಯ ಜನರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಈ ದೇಶವನ್ನು ನಡೆಸುತ್ತಿರುವ ವ್ಯಕ್ತಿ ಹಿಂಸೆ ಮತ್ತು ವಿವೇಚನೆಯಿಲ್ಲದ ಶಕ್ತಿಯನ್ನು ನಂಬುತ್ತಿರುವುದೇ ಇದಕ್ಕೆ ಕಾರಣ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದರು.

ಉನ್ನಾವೋ ರೇಪ್ ಪ್ರಕರಣ:
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗರ್ 2017ರಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ದೂರು ನೀಡಲು ತೆರಳಿದ್ದ ಸಂತ್ರಸ್ತ ಬಾಲಕಿಯ ತಂದೆಯನ್ನು ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಅವರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಕುಲದೀಪ್ ಸಿಂಗ್ ಸೆಂಗರ್ ಬೆಂಬಲಿಗರು, ಸಂಬಂಧಿಕರು ಸಂತ್ರಸ್ತೆಯ ಚಿಕ್ಕಪ್ಪನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‍ನ ಮೇಲ್ವಿಚಾರಣೆಯಲ್ಲಿ ದೆಹಲಿಯ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುತ್ತಿದೆ.

Comments

Leave a Reply

Your email address will not be published. Required fields are marked *