ಕೇರಳ ಪ್ರವಾಸಿಗರಿಗೆ ನಿಷೇಧ ಹೇರಿ- ಡಿಸಿಗೆ ಸಂಘಟನೆಗಳಿಂದ ಮನವಿ

ಚಿಕ್ಕಮಗಳೂರು: ಚೀನಾದ ಬಳಿಕ ಕೇರಳದಲ್ಲೂ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮ ಅನುಸರಿಸುತ್ತಿದ್ದು ಜಿಲ್ಲೆಯ ವಿವಿಧ ಸಂಘಟನೆಗಳು ಕೇರಳದಿಂದ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು ಪ್ರವಾಸಿ ಜಿಲ್ಲೆಯಾಗಿದ್ದು, ರಾಜ್ಯ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಮಧ್ಯೆ ಕೇರಳದಲ್ಲೂ ಕೊರೋನಾ ವೈರಸ್ ಅಂಶ ಪತ್ತೆಯಾಗಿದೆ. ಹೀಗಾಗಿ ಅಲ್ಲಿನ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಸಂಘಟನೆಗಳು ಮನವಿ ಮಾಡಿವೆ.

ಜಿಲ್ಲಾಧಿಕಾರಿ ಡಾ. ಬಗಾಧಿ ಗೌತಮ್ ಅವರನ್ನು ಭೇಟಿ ಮಾಡಿದ ಶ್ರೀರಾಮ ಸೇನೆಯ ಕಾರ್ಯಕರ್ತರು, ಕೇರಳದಿಂದ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕು. ಅವರು ಪ್ರವಾಸಕ್ಕೆಂದು ಬಂದರೆ ಮಹಾಮಾರಿ ಕರೋನ ವೈರಸ್ ನಮ್ಮಲ್ಲೂ ಹರಡುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಕೇರಳ ಪ್ರವಾಸಿಗರಿಗೆ ನಿರ್ಬಂಧ ಹೇರಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಂಗ್ಳೂರು ಪ್ರವೇಶಕ್ಕೆ ಚೀನಾ ಪ್ರವಾಸಿಗರಿಗೆ ನಿಷೇಧ

ಮಾರಣಾಂತಿಕ ಕಾಯಿಲೆ ಕೊರೋನಾ ವೈರಸ್ ತಡೆಗೆ ವಿಶ್ವಾದ್ಯಂತ ಸೂಕ್ತ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಈ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ಕೇರಳದ ಹಲವರಲ್ಲಿ ಈ ವೈರಸ್ ಕಂಡು ಬಂದಿರೋದು ತಪಾಸಣೆ ವೇಳೆ ಧೃಢಪಟ್ಟಿದೆ. ಪ್ರವಾಸಕ್ಕೆಂದು ಬರುವ ಕೇರಳ ಮೂಲದವರಿಂದ ಕಾಯಿಲೆಯು ಹರಡುವ ಸಾಧ್ಯತೆ ಇದ್ದು, ಕೂಡಲೇ ಪ್ರವಾಸಕ್ಕೆಂದು ಬರುವ ಕೇರಳ ಪ್ರವಾಸಿಗರ ಮೇಲೆ ನಿರ್ಬಂಧ ಹೇರಬೇಕೆಂದು ಶ್ರೀರಾಮ ಸೇನೆ ಸಂಘಟನೆಯ ಸಂಚಾಲಕ ರಂಜಿತ್ ಶೆಟ್ಟಿ, ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *