ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

ತಿರುವನಂತಪುರ: ಕೇರಳದ ಖಾಸಗಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

15 ವರ್ಷದ ಗೌರಿ ನೇಹಾ ಕೇರಳದ ಕೊಲ್ಲಂನ ಟ್ರನಿಟಿ ಲೈಸಿಯಂ ಶಾಲೆಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇಂದು ಮೃತಪಟ್ಟಿದ್ದಾಳೆ ಅಂತ ವರದಿಯಾಗಿದೆ.

ಏನಿದು ಘಟನೆ?: 13 ವರ್ಷದ ಸಹೋದರಿ ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಶಿಕ್ಷಕರೊಬ್ಬರು ಆಕೆಯನ್ನು ಹುಡುಗರ ಮಧ್ಯೆ ಕುಳಿತು ಪಾಠ ಕೇಳುವ ಶಿಕ್ಷೆ ನೀಡಿದ್ದರು. ಈ ರೀತಿ ಶಿಕ್ಷೆ ಕೊಟ್ಟ ವಿಚಾರವನ್ನು ಬಾಲಕಿ ತಾಯಿಗೆ ಹೇಳಿದ್ದಾಳೆ. ತಾಯಿ ಶಾಲೆಗೆ ಬಂದು ಈ ಕುರಿತು ಶಾಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಮಗಳಿಗೆ ಇನ್ನೊಂದು ಬಾರಿ ಈ ರೀತಿ ಶಿಕ್ಷೆ ನೀಡಿದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯ ನಂತರ ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆದು ಆಕೆ ಈ ವಿಚಾರವನ್ನು ಸಹೋದರಿಗೆ ತಿಳಿಸಿದ್ದಾಳೆ. ಇದಾದ ಬಳಿಕ ಬ್ರೇಕ್ ನಡುವೆ ಅಕ್ಕ ಈಗ ತಂಗಿ ಎಲ್ಲಿ ಕುಳಿತಿದ್ದಾಳೆ ಎನ್ನುವುದನ್ನು ಪರಿಶೀಲಿಸಲು ತರಗತಿಗೆ ಬರುತ್ತಿದ್ದಳು. ಅಕ್ಕ ತಂಗಿಯನ್ನು ನೋಡಲು ತರಗತಿಗೆ ಬರುವುದನ್ನು ನೋಡಿ ಉಳಿದ ವಿದ್ಯಾರ್ಥಿಗಳು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿನಿ ಶಾಲೆಯ ಮೂರನೇಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಸದ್ಯ ಇತರ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿನಿಯ ಶವವಿಟ್ಟು, ಬಾಲಕಿ ಸಾವಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣವೆಂದು ಪ್ರತಿಭಟನೆ ನಡೆಸಿದರು. ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ಪಡೆಯುವಲ್ಲಿ ವಿಫಲರಾಗಿದ್ದು, ತಂದೆಯ ಹೇಳಿಕೆಯನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *