ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಬ್ರಾ ತೆಗೆಸಿದ ಪರೀಕ್ಷಾ ವೀಕ್ಷಕರು!

ತಿರುವಂತನಪುರಂ: ದೇಶಾದ್ಯಂತ ಮೇ 6ರಂದು ಭಾನುವಾರ ಮೆಡಿಕಲ್ ಹಾಗೂ ದಂತ ವೈದ್ಯಕೀಯ ಸೀಟುಗಳಿಗೆ ನಡೆಯುವ ನೀಟ್ ಪರೀಕ್ಷೆ ನಡೆದಿದೆ.

ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಯ ದಿನ ನನಗೆ ಒಳ ಉಡುಪು ಬಿಚ್ಚುವಂತೆ ಹೇಳಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಪಾಲಕ್ಕಾಡ್ ಸಮೀಪದ ಕೊಪ್ಪಾದ ಲಯನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನೀಟ್ ಪರೀಕ್ಷೆ ಬರೆಯುವ ಮುನ್ನ ಪರೀಕ್ಷಾ ವೀಕ್ಷಕರು ವಿದ್ಯಾರ್ಥಿನಿಯ ಒಳಉಡುಪು ಬಿಚ್ಚುವಂತೆ ಹೇಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕೊಠಡಿಗೆ ಹೋಗುವ ಸಂದರ್ಭದಲ್ಲಿ ಪರೀಕ್ಷಾ ವೀಕ್ಷಕರು ಪರೀಕ್ಷಿಸಿದ್ದಾರೆ. ಆಗ ವಿದ್ಯಾರ್ಥಿನಿ ಸೇರಿದಂತೆ ಕೆಲ ವಿದ್ಯಾರ್ಥಿನಿಯರ ಒಳ ಉಡುಪಿನಲ್ಲಿ ಮೆಟಲ್ ಹುಕ್ ಇದ್ದ ಕಾರಣ ಪರೀಕ್ಷಾ ವೀಕ್ಷಕರು ಶಂಕಿಸಿ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷೆ ಬರೆಸಿದ್ದಾರೆ.

ತಾನು ಪರೀಕ್ಷೆ ಬರೆಯುವ ವೇಳೆ ಪರೀಕ್ಷಾ ವೀಕ್ಷಕರು ತನ್ನನ್ನು ಅಸಭ್ಯವಾಗಿ ನೋಡುತ್ತಿದ್ದರು. ಆದ್ದರಿಂದ ನನಗೆ ಮುಜುಗರವಾಗಿ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ನೊಂದ ವಿದ್ಯಾರ್ಥಿನಿ ಹೇಳಿದ್ದಾರೆ.

ಪರೀಕ್ಷಾ ವೀಕ್ಷಕರು ನನ್ನ ಸಹೋದರಿ ಬಳಿ ಪದೇ ಪದೇ ಬಂದು ನಿಲ್ಲುತ್ತಿದ್ದರು. ಆದ್ದರಿಂದ ಅವಳು ಪ್ರಶ್ನೆಪತ್ರಿಕೆಯಿಂದ ತನ್ನನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಇದರಿಂದ ನನ್ನ ಸಹೋದರಿಗೆ ಮಾನಸಿಕವಾಗಿ ಹಿಂಸೆಯಾಗಿದ್ದು, ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ ಎಂದು ವಿದ್ಯಾರ್ಥಿನಿಯ ಸಹೋದರಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 509 ಅಡಿಯಲ್ಲಿ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಅದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಇತರೆ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ನಂತರ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಬಾರಿ ಕೇರಳದಲ್ಲಿ ಸುಮಾರು ಒಂದು ಲಕ್ಷಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *