ವೆಡ್ಡಿಂಗ್ ಫೋಟೋಶೂಟ್ ವೇಳೆ ಬೋಟ್ ಪಲ್ಟಿ – ವೀಡಿಯೋ ವೈರಲಾಯ್ತು!

ಕುಟ್ಟನಾಡು (ಕೇರಳ): ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಇತ್ತೀಚಿನ ಕೆಲ ವರ್ಷಗಳಿಂದ ಟ್ರೆಂಡ್ ಆಗಿ ಬಿಟ್ಟಿದೆ. ಇದೇ ಫೋಟೋಶೂಟ್ ಮಾಡಿಸಿಕೊಳ್ಳಲು ಹೊರಟ ಕೇರಳದ ದಂಪತಿ ಬೋಟ್‍ನಿಂದ ನೀರಿಗೆ ಬಿದ್ದಿರೋ ವೀಡಿಯೋ ಈಗ ವೈರಲ್ ಆಗಿದೆ. ಆಲೆಪ್ಪಿಯ ಎಡತ್ವಾ ನಿವಾಸಿ ಡೆನ್ನಿ ಹಾಗೂ ತ್ರಿಶೂರ್ ಒಲ್ಲೂರ್ ನಿವಾಸಿ ಪ್ರಿಯಾ ರೋಸ್ ಕೆಲದಿನಗಳ ಹಿಂದಷ್ಟೇ ವಿವಾಹಿತರಾಗಿದ್ದರು.

ಸರೋವರಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳದ ಕುಟ್ಟನಾಡಿಗೆ ಪೋಸ್ಟ್ ವೆಡ್ಡಿಂಗ್ ಶೂಟ್‍ಗೆಂದು ದಂಪತಿ ಬಂದಿದ್ದಾರೆ. ಕೇರಳದಲ್ಲಿ ಬೋಟ್‍ಗಳೆಂದರೆ ಭಾರೀ ಫೇಮಸ್. ಅದರಲ್ಲಿ ಸವಾರಿ ಮಾಡೋದೇ ಒಂದು ಖುಷಿ. ಅಂತಹ ಒಂದು ಪುಟ್ಟ ದೋಣಿಯಲ್ಲಿ ಪತಿ ಪತ್ನಿಯರಿಬ್ಬರು ಜಾಲಿ ರೈಡ್ ಹೊರಟಿದ್ದಾರೆ. ಜೊತೆಯಲ್ಲಿದ್ದ ಕ್ಯಾಮರಾಮೆನ್‍ಗಳು ಫೋಟೋಶೂಟ್ ಶುರು ಮಾಡಿದ್ದಾರೆ.

ಫೋಟೋಗ್ರಾಫರ್ ಎಂದರೆ ಕೇಳಬೇಕಾ… ತನಗೆ ಇಷ್ಟವಾದ ಫೋಟೋ ಸಿಗಲು ‘ಏನೂ ಆಗಲ್ಲ, ಸ್ಮೈಲ್ ಮಾಡಿ, ಬ್ಯೂಟಿಫುಲ್, ಕೂಲ್ ಕೂಲ್, ನೈಸ್.. ನೈಸ್… ಮೇಲೆ ನೋಡಿ… ಚೆನ್ನಾಗಿದೆ’ ಎಂದೆಲ್ಲಾ ಹೇಳಿದ್ದಾರೆ.

ಬಳಿಕ ಕ್ಯಾಮರಾಮೆನ್ ದಂಪತಿಗೆ ಬ್ಯೂಟಿಫುಲ್ ಪೋಸ್ ಎಂದು ಹೇಳಿದ್ದಾರೆ. ಕೈಯಲ್ಲಿದ್ದ ತಾವರೆ ಹೂವನ್ನು ನೀರಲ್ಲಿ ಮುಳುಗಿಸಿ ನೀರನ್ನು ಚಿಮ್ಮಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಪ್ರಿಯಾ ರೋಸ್ ಹೂವನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಅಷ್ಟರಲ್ಲಾಗಲೇ ಬೋಟ್ ಸಮತೋಲನ ತಪ್ಪಿದೆ. ಪ್ರಿಯಾ ರೋಸ್ ಭಯದಿಂದ ಓ ದೇವರೇ…. ಎಂದು ಕೂಗುತ್ತಾರೆ. ಇದಾದ ಕ್ಷಣ ಮಾತ್ರದಲ್ಲಿ ಬೋಟ್ ಬಲಕ್ಕೆ ಮಗುಚಿ ಬೀಳುತ್ತದೆ. ದಂಪತಿಯಿಬ್ಬರೂ ನೀರಲ್ಲಿ ಮುಳುಗುತ್ತಾರೆ. ತಕ್ಷಣ ಪಕ್ಕಕ್ಕೆ ಬಂದ ಡೆನ್ನಿ ಪ್ರಿಯಾರನ್ನು ಎತ್ತಿ ದಡ ಹತ್ತಿಸುತ್ತಾರೆ. ಈ ದೃಶ್ಯಗಳೆಲ್ಲಾ ಕ್ಯಾಮರಾಮೆನ್ ಜಿಬಿನ್ ದೇವ್ ಅವರ ಕ್ಯಾಮರಾದಲ್ಲಿ ದೃಶ್ಯರೂಪದಲ್ಲಿ ಸೆರೆಯಾಗಿವೆ. ಅದನ್ನೀಗ ಅವರು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ

ನದಿಯ ದಂಡೆಯಲ್ಲೇ ಬೋಟ್ ಮಗುಚಿದ್ದರಿಂದ ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಫೋಟೋ ಶೂಟ್‍ಗೆ ಹೋಗಿ ನೀರಿನಲ್ಲಿ ಮುಳುಗಿದ್ದ ದಂಪತಿ ಘಟನೆ ನಡೆದ ಬಳಿಕ ನಗುತ್ತಾ ನಿಂತಿರೋ ಫೋಟೋವೂ ಇದೆ. ಒಟ್ಟಾರೆ ಫೋಟೋಶೂಟ್ ಅವಾಂತರ ಈ ದಂಪತಿಯ ಪಾಲಿಗೆ ಪ್ರಾಣಭಯ ತಂದಿದ್ದಂತೂ ಸುಳ್ಳಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *