ತಲೆಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಮಹಿಳಾ ಪೊಲೀಸ್

ತಿರುವನಂತಪುರಂ: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ತಲೆಕೂದಲನ್ನು ದಾನ ಮಾಡಿ ಮಾದರಿಯಾಗಿದ್ದಾರೆ.

44 ವರ್ಷದ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್ ಅವರು ತಮ್ಮ ಉದ್ದನೆಯ ಕೂದಲನ್ನು ದಾನ ಮಾಡಿದ್ದು, ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರು ತಮ್ಮ ಉದ್ದನೆಯ ಕೂದಲಿಗೆ ಹೆಚ್ಚು ಖ್ಯಾತರಾಗಿದ್ದರು. ಆದರೆ ದಿಢೀರ್ ಎಂದು ಅವರು ಕೂದಲು ಕತ್ತರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಹಾಗೂ ಪೊಲೀಸರ ನಡುವಿನ ಅಂತರ ಕಡಿಮೆಯಾಗುತ್ತಿದ್ದು, ಇದನ್ನು ಮತ್ತಷ್ಟು ಸುಧಾರಣೆ ಮಾಡುವ ಅಗತ್ಯವಿದೆ. ನನಗೆ ಸೌಂದರ್ಯ ಮುಖ್ಯವಲ್ಲ. ಈ ಹಿಂದೆ ಕ್ಯಾನ್ಸರ್ ರೋಗಿಗಳಿಗೆ ಅರ್ಧ ಕೂದಲನ್ನು ದಾನ ಮಾಡಿದ್ದೆ. ಆದರೆ ಈ ಬಾರಿ ಪೂರ್ತಿ ಕೂದಲನ್ನು ದಾನ ಮಾಡಿದ್ದೇನೆ ಎಂದರು.

ಅಪರ್ಣಾ ಅವರ ಈ ಕಾರ್ಯಕ್ಕೆ ಇಲಾಖೆ ಕೂಡ ಸಾಥ್ ನೀಡಿದ್ದು, ಮೇಲಾಧಿಕಾರಿಗಳು ಇದಕ್ಕೆ ಅನುಮತಿಯನ್ನು ನೀಡಿದ್ದಾರೆ. ಕೇವಲ ಕೂದಲಷ್ಟೇ ಅಲ್ಲದೇ 2008 ರಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿಯೊಬ್ಬರು ಆಸ್ಪತ್ರೆಯ ಬಿಲ್ ನೀಡಲು ವಿಫಲವಾದ ಸಂದರ್ಭದಲ್ಲಿ ಅಪರ್ಣಾ ಅವರು ತಮ್ಮ ಕೈಲಿದ್ದ ಬಂಗಾರದ ಬಳೆಯನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ 5ನೇ ತರಗತಿಯ ಬಾಲಕಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದನ್ನು ಕಂಡು ಕೂಡಲು ದಾನ ಮಾಡುವ ನಿರ್ಧಾರ ಮಾಡಿದ್ದರು.

Comments

Leave a Reply

Your email address will not be published. Required fields are marked *