ಕೇರಳ: ಮೀನು ಸಾರು ತಿಂದು 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥ

ತಿರುವನಂತಪುರಂ: ಮೀನು ಸಾರು ತಿಂದ ಬಳಿಕ 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಕೇರಳದ ಪಲ್ಲಿಪುರಂನಲ್ಲಿ ನಡೆದಿದೆ.

ಶನಿವಾರದಂದು ಆಹಾರ ಸೇವಿಸಿದ ಬಳಿಕ ಯೋಧರಿಗೆ ವಾಂತಿ ಮತ್ತು ಬೇಧಿ ಆರಂಭವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನು ಸಾರು ತಿಂದ ಬಳಿಕ ಯೋಧರು ಅಸ್ವಸ್ಥರಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫುಡ್ ಪಾಯ್ಸನಿಂಗ್‍ನಿಂದ ಈ ರೀತಿ ಆಗಿರಬಹುದೆಂದು ಶಂಕಿಸಲಾಗಿದೆ.

ಅಸ್ವಸ್ಥರಾದ 400 ಮಂದಿಯಲ್ಲಿ 109 ಯೋಧರು ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ರಾಜ್ಯ ಆರೋಗ್ಯ ಮಂತ್ರಿ ಕೆಕೆ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿ ಯೋಧರ ಆರೋಗ್ಯ ವಿಚಾರಿಸಿದ್ದಾರೆ.

ಘಟನೆಯ ಬಗ್ಗೆ ಸಿಆರ್‍ಪಿಎಫ್ ಮಹಾನಿರ್ದೇಶಕ ಸುದೀಪ್ ಲಕ್ತಾಕಿಯಾ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ತರಬೇತಿ ಶಿಬಿರಕ್ಕಾಗಿ ತೆರಳಿದ್ದ ಯೋಧರು ಮೀನಿನಿಂದ ಮಾಡಲಾದ ಆಹಾರ ಸೇವಿಸಿದ್ದರು. ಅನಂತರ ಅವರಿಗೆ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

ಅಸ್ವಸ್ಥರಾದ ಯೋಧರಿಗೆ ತರಬೇತಿ ಶಿಬಿರದಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಯೋಧರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದ್ದು, ಕೆಲವರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ.

ಯೋಧರಿಗೆ ನೀಡಿದ ಆಹಾರದಲ್ಲಿ ಬಳಸಲಾದ ವಸ್ತುವಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೆವೆ. ಮೀನು ಹಾಳಾಗಿರುವ ಕಾರಣ ಈ ರೀತಿ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗಿದೆ. ತರಬೇತಿ ಕೇಂದ್ರದ ಉಸ್ತುವಾರಿ ವಹಿಸಿರುವವರು ಈ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಸುದೀಪ್ ಲಕ್ತಾಕಿಯಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *