ಬೆಳ್ಳಿತೆರೆಗೆ ಕಿಚ್ಚು ಹಚ್ಚಲು ರೆಡಿಯಾಗ್ತಿದ್ದಾರೆ `ಕೆಂಡ’ ಕಲಾವಿದರು

ಕೆಂಡ (Kenda) ಈ ಹೆಸರು ಕೇಳಿದಾಕ್ಷಣ ಕಿವಿ ನೆಟ್ಟಗಾಗುತ್ತವೆ. ಯಾಕಂದ್ರೆ, ಆ ಶೀರ್ಷಿಕೆಯಲ್ಲೇ ಫೈಯರ್ ಪ್ಲಸ್ ಪವರ್ ಎರಡೂ ಇದೆ. ಇಂತಹ ಪವರ್ ಫುಲ್ ಹೆಸರನ್ನಿಟ್ಟುಕೊಂಡು ಕಣಕ್ಕಿಳಿಯುವುದಕ್ಕೆ ಪ್ರತಿಭಾನ್ವಿತರ ತಂಡವೊಂದು ಸಜ್ಜಾಗಿದೆ. ಈಗಾಗಲೇ ನಿಮ್ಮೆಲ್ಲರಿಗೂ ಆ ತಂಡದ ಪರಿಚಯವಿದೆ. ಈ ಹಿಂದೆ ಇದೇ ಬಳಗದ ಸಾರಥಿಗಳಾದ ರೂಪಾ ರಾವ್ (Rupa Rao) ಹಾಗೂ ಸಹದೇವ್ ಕೆಲವಡಿಯವರು (Sahadev Kelavadi) `ಗಂಟುಮೂಟೆ’ ಹೆಸರಿನ ಸಿನಿಮಾದ ಮೂಲಕ ನಿಮ್ಮೆಲ್ಲರನ್ನೂ ಎದುರುಗೊಂಡಿದ್ದರು. ಈಗ `ಕೆಂಡ’ ಸಿನಿಮಾದೊಂದಿಗೆ ಮುಖಾಮುಖಿಯಾಗಲು ಬಯಸಿದ್ದಾರೆ. ಇತ್ತೀಚೆಗಷ್ಟೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ನಾವು `ಕೆಂಡ’ದಂತಾ ಸಿನಿಮಾ ಮಾಡಿದ್ದೇವೆ. ನಿಮ್ಮ ಮುಂದೆ ಬರಲು ಸಜ್ಜಾಗುತ್ತಿದ್ದೇವೆ ಎಂದು ಸುಳಿವು ಕೊಟ್ಟಿದ್ದರು. ಈಗ `ಕೆಂಡ’ ಕಲಾವಿದರನ್ನು ಪರಿಚಯಿಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಯಸ್, ಕನ್ನಡ ಸಿನಿಮಾ ಪ್ರೇಕ್ಷಕರಿಗೆ `ಕೆಂಡ’ ಕಲಾವಿದರ ದರ್ಶನವಾಗಿದೆ. ಗಂಟುಮೂಟೆ ಚಿತ್ರ ಬಿಡುಗಡೆಗೊಂಡು 4 ವರ್ಷ ಪೂರೈಸಿದರ ಸಂಭ್ರಮಕ್ಕೆ ಸಾಕ್ಷಿಯಾಗಿ `ಕೆಂಡ’ ಕ್ಯಾರೆಕ್ಟರ್ ಇಂಟ್ರುಡಕ್ಷನ್ ಟೀಸರ್ ಹೊರಬಿದ್ದಿದೆ. ಒಬ್ಬೊಬ್ಬ ಕಲಾವಿದನೂ ಕೂಡ ಬೆಂಕಿನುಂಡೆಯಂತಿದ್ದು, ಬೆಳ್ಳಿತೆರೆಗೆ ಕಿಚ್ಚು ಹಚ್ಚೋದು ಗ್ಯಾರಂಟಿ ಎನ್ನುವ ಸೂಚನೆ ಮೊದಲ ನೋಟದಲ್ಲೇ ಕಾಣಸಿಗ್ತಿದೆ. ಲೋಕೇಶ್ ಹೆಸರಿನ ಪಾತ್ರಕ್ಕೆ ಸಚ್ಚಾ, ಜಯರಾಮ್ ಕ್ಯಾರೆಕ್ಟರ್ ಗೆ ಶರತ್ ಗೌಡ, ವಿನಾಯಕ ರೋಲ್‍ನಲ್ಲಿ ಪ್ರಣವ್ ಶ್ರೀಧರ್, ಕೇಶವನಾಗಿ ಬಿ.ವಿ ಭರತ್ ಅನ್ನೋರು ಬಣ್ಣ ಹಚ್ಚಿದ್ದಾರೆ. ಈ ನಾಲ್ಕು ಕ್ಯಾರೆಕ್ಟರ್ ಕಿಚ್ಚಿಗೆ ಕೆಂಡ ಅಖಾಡ ಧಗಧಗಿಸಿದೆ. ಕಲಾಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡು ಪಾತ್ರದಿಂದಲೇ ಈ ನಾಲ್ವರು ಕಲಾವಿದರು ಗುರ್ತಿಸಿಕೊಳ್ಳುವ ಭರವಸೆ ಹೆಚ್ಚಿದೆ.

ವಿಶೇಷ ಅಂದರೆ `ಕೆಂಡ’ ಅಖಾಡ ಹೊಸಬರಿಂದಲೇ ಕೂಡಿದೆ. ರಂಗಭೂಮಿ ಪ್ರತಿಭೆಗಳು ಪ್ರಧಾನ ಪಾತ್ರ ವಹಿಸಿರುವುದರಿಂದ `ಕೆಂಡ’ ಕಣ ರಣರಣ ರಂಗೇರಿದೆ. ಸಚ್ಚಾ, ಶರತ್‍ಗೌಡ, ಪ್ರಣವ್ ಶ್ರೀಧರ್, ಬಿ.ವಿ ಭರತ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶ್ ಪಾಂಡೆ ಜೊತೆಗೆ ಇನ್ನೂ ಅನೇಕ ಪ್ರತಿಭಾನ್ವಿತ ಪಡೆ ಈ ಸಿನಿಮಾಗೆ ಬಣ್ಣ ಹಚ್ಚಿದೆ. ಬೆಂಗಳೂರಿನಂಥಾ ಮಹಾನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕಿ ಹೇಗೆ ನರಳುತ್ತಿದೆ ಎಂಬುದನ್ನು, ರಾಜಕೀಯ ಹಾಗೂ ಅಪರಾಧದ ತನಿಖೆ ಮೂಲಕ ಜಗತ್ತಿನ ಮುಂದೆ ಹರವಿಡಲು ಸಹದೇವ್ ಕೆಲವರಿಯವರು `ಕೆಂಡ’ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ನಿರ್ದೇಶಕ ಸಹದೇವ್ ಕೆಲವಡಿಯವರು ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು . ಅದರ ಆರಂಭಿಕ ಹೆಜ್ಜೆಯಾಗಿ  ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಹುಟ್ಟುಹಾಕಿದರು. ರೂಪಾ ರಾವ್ ನಿರ್ದೇಶನದ `ಗಂಟುಮೂಟೆ’ ಚಿತ್ರಕ್ಕೆ ಬಂಡವಾಳ ಹೂಡೋದ್ರ ಜೊತೆಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದರು. ಆ ಚಿತ್ರ ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಸ್ಪರ್ಧೆ ಮಾಡಿ ಒಂದಿಷ್ಟು ಅವಾರ್ಡ್‍ಗಳನ್ನು ಮುಡಿಗೇರಿಸಿಕೊಂಡಿತ್ತು. ಆ ಒಂದು ಖುಷಿ ಮತ್ತು ಸಂಭ್ರಮಕ್ಕೆ ಸಾಕ್ಷಿಯೆಂಬಂತೆ ಈ ಇಬ್ಬರು ಜೊತೆಗೂಡಿ `ಕೆಂಡ’ ಚಿತ್ರ ತಯಾರು ಮಾಡಿದ್ದಾರೆ. ಈ ಭಾರಿ ನಿರ್ದೇಶನದ ಹೊಣೆಯನ್ನ ಸಹದೇವ್ ಕೆಲವಡಿಯವರು ಹೊತ್ತಿದ್ದಾರೆ.

ಹೌದು, ಕೆಂಡದ ಮೂಲಕ ಸಹದೇವ್ ಕೆಲವಡಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇಂಗ್ಲಿಷ್ , ಹಿಂದಿ, ಜರ್ಮನ್ ಹೀಗೆ ಪರಭಾಷೆಯಲ್ಲಿ ಶಾರ್ಟ್‍ಫಿಲ್ಮ್, ಡಾಕ್ಯೂಮೆಂಟರಿ, ವೆಬ್‍ಸೀರೀಸ್‍ಗಳನ್ನು ಮಾಡಿ ಸೈ ಎನಿಸಿಕೊಂಡು `ಗಂಟುಮೂಟೆ’ ಮೂಲಕ ಕನ್ನಡಿಗರಿಂದ ಭೇಷ್ ಎನಿಸಿಕೊಂಡ, ಬೆಂಗಳೂರು ಮೂಲದ ಮಹಿಳಾ ನಿರ್ದೇಶಕಿ ರೂಪಾ ರಾವ್ ಸಹದೇವ್‍ಗೆ ಸಾಥ್ ನೀಡಿದ್ದಾರೆ.  ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ.

 

ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಸಿಕೊಂಡಿರುವ `ಕೆಂಡ’ ರೂವಾರಿಗಳು, ಆದಷ್ಟು ಬೇಗ ತಮ್ಮ ಕನಸಿನ `ಕೆಂಡ’ ಚಿತ್ರವನ್ನ ಕಲಾಭಿಮಾನಿಗಳ ಕಣ್ಮುಂದೆ ತರಲು ಶ್ರಮಿಸ್ತಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]