ಆಪರೇಷನ್ ಕಮಲಕ್ಕೆ 200 ಕೋಟಿ ಹಣ ಎಲ್ಲಿಂದ ಬಂತು – ಮೋದಿ ಉತ್ತರಿಸಬೇಕು: ವೇಣುಗೋಪಾಲ್

ನವದೆಹಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಪರೇಷನ್ ಕಮಲದ ಆಡಿಯೋದಲ್ಲಿ ಅವರದೇ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಉಲ್ಲೇಖಿಸಿದ್ದು, ಈ ಸಂಬಂಧ ಪ್ರಧಾನಿಗಳೇ ನೇರವಾಗಿ ಉತ್ತರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಆಗ್ರಹಿಸಿದ್ದಾರೆ.

ಇಂದು ದೆಹಲಿಯಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಆಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ವೇಣುಗೋಪಾಲ್, ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನಿರಂತರವಾಗಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸುತ್ತಿದೆ, ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಸರ್ಕಾರ ಅಸ್ಥಿರ ಮಾಡಲು ಸಾಧ್ಯವಿಲ್ಲ ಎಂದರು.

ಆಡಿಯೋದಲ್ಲಿ ಹದಿನೆಂಟು ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಪ್ರತಿ ಶಾಸಕರಿಗೆ ಹತ್ತು ಕೋಟಿ, ಸ್ಪೀಕರ್‍ಗೆ 50 ಕೋಟಿ ಹಾಗೂ ಸುಪ್ರೀಂಕೋರ್ಟ್ ಜಡ್ಜ್ ಗಳನ್ನು ಮ್ಯಾನೇಜ್ ಮಾಡುವುದಾಗಿ ಹೇಳಿದ್ದಾರೆ. ಶಾಸಕರಿಗೆ ಹಣ ಕೊಡಲು 200 ಕೋಟಿ ಹಣ ಬಿಜೆಪಿಗೆ ಎಲ್ಲಿಂದ ಬಂತು ಎನ್ನುವುದನ್ನು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕರ್ನಾಟಕದಲ್ಲಿನ ಸಾಂವಿಧಾನ ಬದ್ಧ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪ ಜಂಟಿ ಕಾರ್ಯಚರಣೆ ನಡೆಸಿದ್ದಾರೆ. ಕುದುರೆ ವ್ಯಾಪಾರಕ್ಕಾಗಿ ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದ್ದು ಇದ್ದೆಲ್ಲವು ಕಪ್ಪು ಹಣವೋ ಬಿಳಿ ಹಣವೋ ಎಂದು ಪ್ರಶ್ನಿಸಿದ್ರು.

ಪ್ರತಿ ಶಾಸಕನಿಗೆ ಹತ್ತು ಕೋಟಿ ಡಿಮ್ಯಾಂಡ್ ಮಾಡಿದ್ದ ಸ್ಪೀಕರ್‍ಗೆ ಐವತ್ತು ಕೋಟಿ ನೀಡುವ ಬಗ್ಗೆ ಆಡಿಯೋ ದಾಖಲೆ ಇದೆ. ಆಪರೇಷನ್ ಕಮಲಕ್ಕೆ ಈ ಪ್ರಮಾಣದ ಹಣ ಖರ್ಚು ಮಾಡಲು ಹೊರಟಿರುವ ಬಿಜೆಪಿಗೆ ಆ ಹಣ ಎಲ್ಲಂದ ಬಂತು? ಈ ಮೂಲಕ ಬಿಜೆಪಿ ದರ್ಟಿ ಪಾಲಿಟಿಕ್ಸ್ ಮಾಡಲು ಹೊರಟಿದೆ ಎಂದು ಕಿಡಿ ಕಾರಿದರು. ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ಕೊಲೆ ಮಾಡಲು ಹೊರಟಿರುವ ಬಿಜೆಪಿ ನಡೆ ರಾಷ್ಟ್ರೀಯ ಅವಮಾನ ಎಂದು ಸುರ್ಜೆವಾಲ್ ಆಕ್ರೋಶ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *