ಕತ್ರಿನಾ, ವಿಕ್ಕಿ ಮದುವೆಗೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ: ಸಲ್ಮಾನ್‌ ಖಾನ್‌ ಸಹೋದರಿ

ನವದೆಹಲಿ: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಜೋಡಿ ಮದುವೆಗೆ ಸಂಬಂಧಿಸಿದಂತೆ ದಿನೇ ದಿನೇ ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ. ಈ ಜೋಡಿ ಇಂದು ಅಥವಾ ನಾಳೆ (ಶುಕ್ರವಾರ) ಮುಂಬೈನಲ್ಲಿ ಕೋರ್ಟ್‌ ಮ್ಯಾರೇಜ್‌ ಆಗ್ತಾರಂತೆ.

ಕೋರ್ಟ್‌ ಮ್ಯಾರೇಜ್‌ನಲ್ಲಿ ಕತ್ರಿನಾ ಮತ್ತು ವಿಕ್ಕಿ ಜೋಡಿಯ ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರಂತೆ. ಇವರ ವಿವಾಹವು “ವಿಶೇಷ ವಿವಾಹ ಕಾಯ್ದೆ, 1954″ಯಡಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ. ಈ ತಾರಾಜೋಡಿಯ ವಿವಾಹಕ್ಕೆ ಸಾಕ್ಷಿಯಾಗಿ ಮೂವರು ಸಹಿ ಹಾಕಲಿದ್ದಾರೆ. ಇವರ ವಿವಾಹವು ನೋಂದಣಿಯಾಗಲಿದೆ. ನಂತರ ಕತ್ರಿನಾ ಮತ್ತು ವಿಕ್ಕಿ ರಾಜಸ್ಥಾನಕ್ಕೆ ತೆರಳಿ ಅದ್ದೂರಿಯಾಗಿ ಮದುವೆ ಸಮಾರಂಭ ಏರ್ಪಡಿಸಲಿದ್ದು, ಕುಟುಂಬದವರು ಮತ್ತು ಸ್ನೇಹಿತರನ್ನು ಆಹ್ವಾನಿಸಲಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

ಈ ಜೋಡಿಯ ವಿವಾಹಕ್ಕೆ ಯಾರ‍್ಯಾರಿಗೆ ಆಹ್ವಾನ ಇರಲಿದೆ ಎಂಬ ಬಗ್ಗೆಯೂ ಕುತೂಹಲ ಇತ್ತು. ಕತ್ರಿನಾ ಅವರ ಆತ್ಮೀಯ ಸ್ನೇಹಿತರಾದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕುಟುಂಬದವರಿಗೆ ಆಹ್ವಾನ ಇದೆ ಎಂದು ಸುದ್ದಿಯಾಗಿತ್ತು. ಆದರೆ ಸಲ್ಮಾನ್‌ ಖಾನ್‌ ಅವರ ಸಹೋದರಿ ಅರ್ಪಿತಾ ಖಾನ್‌ ಶರ್ಮ, ನಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕತ್ರಿನಾ ಮತ್ತು ವಿಕ್ಕಿ ವಿವಾಹ ಸಮಾರಂಭಕ್ಕೆ ಬಾಲಿವುಡ್‌ ತಾರೆಗಳಾದ ಕರಣ್‌ ಜೋಹರ್‌, ಅಲಿ ಅಬ್ಬಾಸ್‌ ಜಾಫರ್‌, ಕಬಿರ್‌ ಖಾನ್‌, ಮಿನಿ ಮಥುರ್‌, ರೋಹಿತ್‌ ಶೆಟ್ಟಿ, ಸಿದ್ಧಾರ್ಥ್‌ ಮಲ್ಹೋತ್ರಾ, ಕೈರಾ ಅಡ್ವಾಣಿ, ವರುಣ್‌ ಧವನ್‌, ನಟಾಶ ದಲಾಲ್‌ ಮೊದಲಾದವರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

ಕತ್ರಿನಾ ಮತ್ತು ವಿಕ್ಕಿ 2019ರಿಂದ ಹೊರಗಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವಿಚಾರವನ್ನು ನಟ ವರ್ಧಾನ್‌ ಕಪೂರ್‌ ಸ್ಪಷ್ಟಪಡಿಸಿದ್ದರು.

Comments

Leave a Reply

Your email address will not be published. Required fields are marked *