ರಾಜ್ಯಕ್ಕೆ ಬೆಳಕು ನೀಡಿದ ಜನರ ಬದುಕು ಕತ್ತಲಲ್ಲಿ- ಗ್ರಾಮದಲ್ಲಿ ಪ್ರತಿ ದಿನ ಕಂಪಿಸುತ್ತೆ ಭೂಮಿ

ಕಾರವಾರ: ಆ ಊರಿನಲ್ಲಿ ಪ್ರತಿ ದಿನ ಭೂಮಿ ಕಂಪಿಸುತ್ತೆ. ಇದ್ದಕ್ಕಿದ್ದ ಹಾಗೆ ಮನೆಗಳ ಮೇಲೆ ಕಲ್ಲುಗಳು ಬಿದ್ದರೆ ಕಂಪನದಿಂದ ಮನೆಗಳೇ ಬಿರುಕು ಬಿಡುತ್ತಿವೆ. ಹೌದು ಕಲ್ಲು ಗಣಿಗಾರಿಕೆಯಿಂದ ಈ ಅವಾಂತರ ಸೃಷ್ಟಿಯಾಗಿದ್ದು, ಜನ ನಿತ್ಯವೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ಬದುಕಬೇಕಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ, ಅಡಾಳಿ, ಗೌಳಿವಾಡದ ಜನ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ಕತ್ತಲು ಮಾಡಿಕೊಂಡು ಹೊಸ ಬದುಕು ಕಟ್ಟಿಕೊಂಡವರು. ರಾಜ್ಯ ಸರ್ಕಾರದ ಸೂಪಾ ಜಲವಿದ್ಯುತ್ ಯೋಜನೆಯಲ್ಲಿ ತಮ್ಮ ಜಮೀನನ್ನು ಕಳೆದುಕೊಂಡ ನಿರಾಶ್ರಿತರಿಗಾಗಿ 35 ವರ್ಷದ ಹಿಂದೆಯೇ ರಾಮನಗರದಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಜಮೀನನ್ನು ನೀಡಿದೆ. ಈ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನ ಇದೀಗ ಭಯದಿಂದ ಜೀವನ ಸಾಗಿಸಬೇಕಾಗಿದೆ.

ಸರ್ಕಾರ ನೀಡಿದ ಜಮೀನಿನಲ್ಲಿ ಬದುಕು ಕಟ್ಟಿಕೊಂಡ ಜನರಿಗೆ ಜಿಲ್ಲಾಡಳಿತ ಈ ಊರಿನ ಮಾರುದೂರದಲ್ಲಿಯೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಮೊದಲು ಎಂಟು ಗುತ್ತಿಗೆದಾರರಿಗೆ ಕಲ್ಲುಗಣಿಗಾರಿಕೆಗಾಗಿ ತಲಾ ಎರಡು ಎಕರೆ ಪ್ರದೇಶವನ್ನು ರಾಮನಗರದ ಸರ್ವೆ ನಂ.45 ರಲ್ಲಿ ಅವಕಾಶ ಮಾಡಿಕೊಟ್ಟಿತು. ಗಣಿಗಾರಿಕೆಗಾಗಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮೊದಲು ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ಪ್ರಾರಂಭಿಸಿದರು. ಆದರೆ ದುರಾಸೆಗೆ ಬಿದ್ದ ಗಣಿ ಮಾಲೀಕರು ಇಲ್ಲಿನ ನೂರು ಎಕರೆ ಪ್ರದೇಶವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕಾನೂನು ಬಾಹಿರವಾಗಿ ನಿಯಮ ಮೀರಿ ಗಣಿಗಾರಿಕೆ ಮಾಡುತಿದ್ದು, ಮಾತ್ರವಲ್ಲದೆ ದೊಡ್ಡ ಪ್ರಮಾಣದ ಸ್ಫೋಟಕ ಬಳಸಿ ಕಲ್ಲುಗಳನ್ನು ಸಿಡಿಯಲು ಶುರುಮಾಡಿದ್ದಾರೆ.

ಇದರಿಂದಾಗಿ ಇಡೀ ಗ್ರಾಮ ಕಲ್ಲಿನ ಧೂಳಿನಿಂದ ಆವರಿಸಿದೆ ಸಿಡಿತಲೆಯಿಂದಾಗಿ ಗ್ರಾಮದಲ್ಲಿರುವ ಮನೆಗಳು ಬಿರುಕು ಬಿಡಲು ಪ್ರಾರಂಭಿಸಿವೆ. ಗಣಿಗಾರಿಕೆಯಿಂದಾಗಿ ಗ್ರಾಮದ ಜನ ಕೃಷಿ ಭೂಮಿ ಉಳುವುದನ್ನೂ ಬಿಡುವಂತಾಗಿದ್ದು, ನರಕದಲ್ಲಿ ಜೀವನ ನಡೆಸುವಂತಾಗಿದೆ.

ಪ್ರತಿಭಟಿಸಿದರೂ ಕೇಳೋರಿಲ್ಲ!

ರಾಮನಗರದ ಜನ ಅಕ್ರಮ ಗಣಿಗಾರಿಕೆಯಿಂದ ತಮ್ಮ ಜಮೀನಿನಲ್ಲಿ ಕೃಷಿ ಬಿಡುವಂತಾದರೆ, ಇಡೀ ಗ್ರಾಮ ಧೂಳಿನಿಂದ ತುಂಬಿಹೋಗಿದ್ದು ಸಿಡಿತಲೆಯಿಂದಾಗಿ ಮನೆಗಳು ಬಿರುಕು ಬಿಟ್ಟಿವೆ. ಈ ಕುರಿತು ಪ್ರತಿಭಟನೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಹಾಗೂ ಜೋಯಿಡಾದ ತಹಶೀಲ್ದಾರ್ ಗೆ ಮನವಿ ಸಲ್ಲಿಸುತ್ತಲೇ ಬಂದಿದ್ದು, ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲವೆಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಈ ಕುರಿತು ಜೋಯಿಡಾ ದ ತಹಶೀಲ್ದಾರ್ ಸಂಜಯ್ ಕಾಂಬ್ಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೇವಲ ಎರಡು ಎಕರೆ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯುತಿಲ್ಲ, ಯಾವುದೇ ಸಮಸ್ಯೆಯಾಗಿಲ್ಲ ಎಂದು ತೇಪೆ ಹಾಕುತಿದ್ದಾರೆ. ಕಾನೂನು ಬಾಹಿರ ಬ್ಲಾಸ್ಟಿಂಗ್ ನಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಸ್ಥಳ ಪರಿಶೀಲನೆ ನಡೆಸಿದಾಗ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡುತಿದ್ದು, ನಿಯಮಗಳನ್ನು ಗಾಳಿಗೆ ತೂರಿ ಅತ್ಯಂತ ಪ್ರಭಲ ಸಿಡಿತಲೆ ಬಳಸಿ ಬಂಡೆಗಳನ್ನು ಒಡೆಯಲಾಗುತ್ತಿದೆ. ಇದರಿಂದಾಗಿ ಇಲ್ಲಿನ ಅಂತರ್ಜಲ ಕೂಡ ಬತ್ತಿ ಹೋಗಿದ್ದು, ಇಡೀ ಗ್ರಾಮ ಧೂಳಿನಿಂದ ತುಂಬಿದೆ. ಹೆಚ್ಚು ಧೂಳು ಆವರಿಸಿದ್ದರಿಂದ ಹಿಮ ಆವರಿಸಿದಂತೆ ಭಾಸವಾಗುತ್ತದೆ. ಅಲ್ಲದೆ ಗ್ರಾಮಕ್ಕೆ ಹೋಗುವ ದಾರಿಯನ್ನೂ ಗಣಿ ಮಾಲೀಕರು ನುಂಗಿದ್ದು, ಗಣಿಗಾರಿಕೆಗಾಗಿ ದಾರಿಯನ್ನೂ ಬಳಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *