ಪೊಲೀಸರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಯುವತಿ

– ಯುವತಿಯ ಆಸೆ ಈಡೇರಿಸಿದ ಪೊಲೀಸರು

ಕಾರವಾರ: ಕೊರೊನಾ ವಾರಿಯರ್ಸ್ ಎಂದೇ ಗುರುತಿಸಿಕೊಂಡಿರುವ ಪೊಲೀಸರು ಕೂಡಾ ಈ ಮಹಾಮಾರಿ ಹಬ್ಬದಂತೆ ತಡೆಗಟ್ಟುವಲ್ಲಿ ವೈದ್ಯರ ಜೊತೆ ಅವಿರತ ಶ್ರಮ ನಡೆಸುತ್ತಿದ್ದಾರೆ.

ತನ್ನ ಕುಟುಂಬದಿಂದ ದೂರ ಉಳಿದು ಸಮಾಜದ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರ ಈ ಶ್ಲಾಘನೀಯ ಕಾರ್ಯಕ್ಕೆ ಮೆಚ್ಚಿ ಯುವತಿಯೋರ್ವಳು ತನ್ನ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್ಲಾಗಿ ಪೊಲೀಸರ ಜೊತೆಯಲ್ಲೇ ಆಚರಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಳು. ಇದಕ್ಕೆ ಆಕೆಯ ಕುಟುಂಬ ಸಹ ಒಪ್ಪಿತ್ತು. ಆದರೇ ಲಾಕ್‍ಡೌನ್ ಸಂದರ್ಭದಲ್ಲಿ ಇದು ಸಾಧ್ಯನಾ ಎಂದು ಕಾರವಾರದ ಪೊಲೀಸರಲ್ಲಿ ವಿನಂತಿ ಮಾಡಿದ್ದ ಕುಟುಂಬಕ್ಕೆ ಕಾರವಾರದ ಪೊಲೀಸರು ಸ್ಪಂದಿಸಿದ್ದಾರೆ.

ಹೌದು ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕಾಜುಬಾಗ್‍ನಲ್ಲಿರುವ ಜಮೀರ್ ಶಾಪಿಂಗ್ ಮಾಲ್ ಕಾಂಪ್ಲೆಕ್ಸ್ ನ ಆಯಿಶಾ ಮೊಹಮ್ಮದ್ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡಿದ್ದಾರೆ.

ತಮ್ಮ ಕರ್ತವ್ಯ ಪ್ರಜ್ಞೆಯ ಮೂಲಕ ಜನರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿರುವುದಲ್ಲದೇ, ದಿನದ 24 ಗಂಟೆಯೂ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರ ಸೇವೆಯನ್ನು ಯುವತಿ ಶ್ಲಾಘಿಸಿದ್ದಾರೆ. ಇದರ ಜೊತೆಗೆ ಪೊಲೀಸರ ಜೊತೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಈಕೆಯ ಆಸೆಯನ್ನು ನಿರಾಸೆಗೊಳಿಸದೇ ಕಾರವಾರ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಯುವತಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ತಮ್ಮ ಠಾಣೆಯಲ್ಲಿ ಅವಕಾಶ ನೀಡಿದ್ದಾರೆ.

ಈ ಮೂಲಕ ಠಾಣೆಯ ಸಿಬ್ಬಂದಿ ಮತ್ತು ಪೊಲೀಸರು ಸೇರಿ ಯುವತಿಯ ಹುಟ್ಟುಹಬ್ಬ ಮಾಡಿದ್ದಾರೆ. ಪೊಲೀಸರು ಕೂಡ ಎಂತಹ ಕ್ಲಿಷ್ಟಕರ ದಿನದಲ್ಲಿಯೂ ಜನರೊಂದಿಗೆ ಪ್ರೀತಿಯಿಂದ ಸ್ಪಂದಿಸುತ್ತಾರೆ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಯುವತಿ ತಮ್ಮ ತಂದೆ ಜೊತೆ ಬಂದು ಕೇಕ್ ಕಟ್ ಮಾಡಿ ವಾಪಸ್ ಹೋಗಿದ್ದಾರೆ.

Comments

Leave a Reply

Your email address will not be published. Required fields are marked *