ಭಟ್ಕಳದಲ್ಲಿ 39ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ

– ಇಬ್ಬರು ಬಾಲಕರು, ಆಟೋ ಚಾಲಕನಿಗೂ ಸೋಂಕು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಏಳು ಕೊರೊನಾ ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಸೋಂಕಿತ ಎಂಟು ಮಂದಿಯನ್ನು ಸಂಪರ್ಕ ಮಾಡಿರುವ ಏಳು ಜನರಲ್ಲಿ ಇಬ್ಬರು ಬಾಲಕರು ಸೇರಿ ಐದು ಜನ ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೋಂಕು ದೃಢವಾಗಿದೆ. ಇವರೆಲ್ಲರೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದವರಾಗಿದ್ದು, ರೋಗಿ ಸಂಖ್ಯೆ 659ರ ಜೊತೆ ದ್ವಿತೀಯ ಹಾಗೂ ನೇರ ಸಂಪರ್ಕಕ್ಕೆ ಬಂದಿದ್ದವರಾಗಿದ್ದಾರೆ.

50 ವರ್ಷದ ಮಹಿಳೆ, 21 ವರ್ಷದ ಯುವತಿ, 16 ಮತ್ತು 15 ವರ್ಷದ ಬಾಲಕರು, 42, 31, 60 ವರ್ಷದ ಪುರುಷರು ಸೋಂಕಿತರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಎರಡು ದಿನದಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಜಿಲ್ಲಾಡಳಿತ 30 ಮಂದಿಯ ಗಂಟಲ ದ್ರವದ ಮಾದರಿಯನ್ನು ಲ್ಯಾಬ್‍ಗೆ ಕಳುಹಿಸಿದ್ದು, ಇವುಗಳಲ್ಲಿ ಮೊದಲ ಹಂತದ ಪರೀಕ್ಷಾ ಪಲಿತಾಂಶ ಬಂದಿದೆ. ಸಂಜೆ ಅಥವಾ ನಾಳೆ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ.

ಇಂದು ಪಾಸಿಟಿವ್ ಬಂದವರಲ್ಲಿ 42 ವರ್ಷದ ಆಟೋ ಚಾಲಕನೂ ಸೇರಿದ್ದು, ಎಲ್ಲರೂ ಏಳು ಮಂದಿ ನಿನ್ನೆ ಸೋಂಕು ದೃಢಪಟ್ಟ ಸೋಂಕಿತರ ಸಂಬಂಧಿಗಳಾಗಿದ್ದಾರೆ. ಆಟೋ ಚಾಲಕನಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತ ಯಾವ ಪ್ರದೇಶಕ್ಕೆ ಸಂಚರಿಸಿದ್ದ ಎಂಬ ಮಾಹಿತಿ ಹೊರಬರಬೇಕಿದೆ. ಸೋಂಕಿತರಲ್ಲಿ ಕೆಲವರು ಉಡುಪಿ ಹಾಗೂ ಭಟ್ಕಳದಲ್ಲಿ ಸಂಚರಿಸಿದ್ದು, ಮೂವರು ಮೆಡಿಕಲ್ ಸ್ಟೋರ್‍ನಲ್ಲಿ ಮಾತ್ರೆ ಖರೀದಿಸಿದ್ದರು ಎಂದು ಮೊದಲ ಹಂತದ ವಿವರದಲ್ಲಿ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *