ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

– ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಚೆನ್ನೈ: ತಮಿಳುನಾಡಿನ (Tamil Nadu) ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ (Karur Stampede) ಮೃತಪಟ್ಟವರ ಕುಟುಂಬಕ್ಕೆ ನಟ, ರಾಜಕಾರಣಿ ವಿಜಯ್ ದಳಪತಿ (Thalapathy Vijay) ತಲಾ 20 ಲಕ್ಷ ರೂ. ಪರಿಹಾರ (Compensation) ಘೋಷಿಸಿದ್ದು, ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ತಮಿಳುನಾಡು ಕರೂರಿನಲ್ಲಿ ವಿಜಯ್ ದಳಪತಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 39 ಮಂದಿ ಸಾವನ್ನಪ್ಪಿದ್ದು, 48 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವಿಜಯ್ ದಳಪತಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಘಟನೆಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಿದ್ದಾರೆ.

ಎಕ್ಸ್‌ನಲ್ಲಿ ಏನಿದೆ?
ನನ್ನ ಹೃದಯದಲ್ಲಿ ನೆಲೆಸಿರುವ ಎಲ್ಲರಿಗೂ ನಮಸ್ಕಾರಗಳು. ಶನಿವಾರ ಕರೂರಿನಲ್ಲಿ ನಡೆದ ದುರಂತದಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಗಳಿಗೆ ನನ್ನ ಸಂತಾಪವನ್ನು ಸೂಚಿಸುತ್ತಾ, ಈ ದುಃಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಘಟನೆಯಿಂದ ನನ್ನ ಹೃದಯ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಯಾರೇ ಸಾಂತ್ವನದ ಮಾತುಗಳನ್ನು ಹೇಳಿದರೂ, ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ನಿಮ್ಮ ಕುಟುಂಬದ ಸದಸ್ಯನಾಗಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿ ಕುಟುಂಬಕ್ಕೆ 20 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ 2 ಲಕ್ಷ ರೂ. ನೀಡಲು ನಾನು ಉದ್ದೇಶಿಸಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ಈ ಮೊತ್ತವು ಗಮನಾರ್ಹವಾಗಿಲ್ಲ. ಆದರೂ, ಈ ಕ್ಷಣದಲ್ಲಿ, ನಿಮ್ಮ ಕುಟುಂಬಕ್ಕೆ ಸೇರಿದವನಾಗಿ, ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ.

ಅದೇ ರೀತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮೆಲ್ಲರ ಪ್ರೀತಿಪಾತ್ರರು ಬೇಗನೆ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಮ್ಮ ಪ್ರೀತಿಪಾತ್ರರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷ ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಘಟನೆ ಏನು?
ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.

ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಇನ್ನು ಇದೇ ವೇಳೆ 9 ವರ್ಷದ ಬಾಲಕಿ ಕಳೆದು ಹೋಗಿರ್ತಾಳೆ. ಆಗ ವಿಜಯ್ ಮೈಕ್ ಮೂಲಕ ಪೊಲೀಸರಿಗೆ ಮನವಿ ಮಾಡ್ತಾರೆ. ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಲೇ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಂದ್ಹಾಗೆ ರ‍್ಯಾಲಿ ತಡವಾಗಿ ಸಂಜೆ ಆರಂಭವಾಗಿತ್ತು. ಹೀಗಾಗಿ ವಿಜಯ್ ನೋಡಲು ಫ್ಯಾನ್ಸ್ ಮುಗಿ ಬಿದ್ದಿದ್ರು. ಅಲ್ದೆ ರ‍್ಯಾಲಿ ವೇಳೆ ಕರೆಂಟ್ ತೆಗೆದಿದ್ದರಿಂದ ದುರಂತ ಸಂಭವಿಸಿದೆ.

39 ಮಂದಿ ಸಾವು, 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸ್ಥಳಪರಿಶೀಲನೆ ನಡೆಸಿದ ಎಡಿಜಿಪಿ ಡೇವಿಡ್ ಸನ್ ಆಶಿರ್ವಾದ್ ಮಾತನಾಡಿ, 10,000 ಜನ ಸೇರುತ್ತಾರೆ ಅಂತ ಅನುಮತಿ ಪಡೆದಿದ್ದರು. ಹೀಗಾಗಿ 116 ಸ್ಥಳೀಯ ಪೊಲೀಸರು ಹೊರತುಪಡಿಸಿ ಹೆಚ್ಚುವರಿ 500 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಈ ಹಿಂದೆಯೂ 15,000 ಜನಕ್ಕೆ 600 ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಆದ್ರೆ ಇಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 39 ಮಂದಿ ಸಾವನ್ನಪ್ಪಿದ್ದಾರೆ. 48 ಮಂದಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ, ದುರಂತಕ್ಕೆ ಕಾರಣಗಳನ್ನ ಪಟ್ಟಿ ಮಾಡಿದ್ದೇವೆಂದು ತಿಳಿಸಿದ್ದಾರೆ.