– ಎಲ್ಲಿದೆ? ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ
ಕಾರವಾರ: ಅಂಧ ವಿದ್ಯಾರ್ಥಿಗಳಿಗಾಗಿ ರಾಜ್ಯದಲ್ಲೇ ಮೊಟ್ಟಮೊದಲ ಹೈಟೆಕ್ ಭಾಷಾ ಪ್ರಯೋಗಾಲಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪ್ರಾರಂಭವಾಗಿದೆ.
ಸಿದ್ದಾಪುರ ತಾಲೂಕಿನ ಹಾಳದಕಟ್ಟದ ಜಗದ್ಗುರು ಮುರುಘರಾಜೇಂದ್ರ ಅಂಧ ವಿದ್ಯಾರ್ಥಿಗಳ ಶಾಲೆಯಲ್ಲಿ ಈ ಹೈಟೆಕ್ ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಪೇಪರ್ ಲಕೋಟೆ ತಯಾರಿಕೆಯಲ್ಲಿ ತೊಡಗಿರುವ ಅಂಧ ವಿದ್ಯಾರ್ಥಿಗಳ ಬಾಳಿನಲ್ಲಿ ಆಶಾಕಿರಣ ಟ್ರಸ್ಟ್, ಈ ಮೂಲಕ ಮತ್ತೊಂದು ಆಶಾಕಿರಣ ಮೂಡಿಸಿದೆ.

ರಾಜ್ಯದಲ್ಲೇ ಅಂಧ ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾದ ಮೊದಲ ಹೈಟೆಕ್ ಭಾಷಾ ಪ್ರಯೋಗಾಲಯವೆಂಬ ಹೆಮ್ಮೆ ಈ ಶಾಲೆಯದ್ದು. ಈ ಶಾಲೆಯಲ್ಲಿ 33 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಭಾಷಾ ಕಲಿಕೆಯ ಜೊತೆ ಪೇಪರ್ ಲಕೋಟೆ ತಯಾರಿಕೆ ಕೂಡ ಮಾಡುತ್ತಿದ್ದಾರೆ. ಇಡೀ ತಾಲೂಕಿಗೆ ಸರಬರಾಜಾಗುವ ಲಕೋಟೆ ಇಲ್ಲಿಂದಲೇ ತಯಾರಾಗುತ್ತದೆ. ಎಲ್ಲರಂತೆ ಸಮಾಜದಲ್ಲಿ ಸ್ಪರ್ಧಿಸಲು ಹಾಗೂ ಉದ್ಯೋಗ ಪಡೆದು ಕೊಳ್ಳುವ ನಿಟ್ಟಿನಲ್ಲಿ ಇಂಗ್ಲಿಷ್ ಭಾಷಾ ಕಲಿಕೆಗಾಗಿ ಪ್ರಯೋಗಾಲಯ ಪ್ರಾರಂಭವಾಗಿದೆ.

ಭಾಷಾ ಪ್ರಯೋಗಾಲಯ ಅಂದರೇನು? ಹೇಗೆ ಕಾರ್ಯ ನಿರ್ವಹಿಸುತ್ತೆ?
ಇಂಗ್ಲಿಷ್ ಕಲಿಯಲು ಆಸಕ್ತರಾಗಿರೋ ಅಂಧ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಪರದೆಯಲ್ಲಿ ಬರೋ ಚಿತ್ರದ ಮೂಲಕ ಕಲಿಕೆಯನ್ನ ಹೇಳಿಕೊಡುವುದೇ ಭಾಷಾ ಪ್ರಯೋಗಾಲಯ. ಈ ಪ್ರಯೋಗಾಲಯದಲ್ಲಿ ಬೃಹತ್ ಪರದೆಯೊಂದನ್ನ ಇಡಲಾಗಿದೆ. ಪರದೆಯ ಎದುರುಗಡೆ 50 ಜನ ಕುಳಿತುಕೊಳ್ಳಬಹುದಾದ ಟೇಬಲ್ ಆಸನ ವ್ಯವಸ್ಥೆಗಳನ್ನ ಒದಗಿಸಲಾಗಿದೆ. ಪ್ರತಿಯೊಂದು ಟೇಬಲ್ ಗಳಿಗೆ ಒಂದೊಂದು ಹೆಡ್ ಫೋನ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಕಲಿಸೋ ಇಂಗ್ಲಿಷ್ ಪದಗಳನ್ನ ಪ್ರೊಜೆಕ್ಟರ್ ಮೂಲಕ ಪರದೆಯ ಮೇಲೆ ಮೂಡಿಸಲಾಗುತ್ತೆ. ಮೊದಲು ಇಂಗ್ಲಿಷ್ ಪದಗಳನ್ನು ಹೆಡ್‍ಫೋನ್ ಗಳ ಮೂಲಕ ಕೇಳಿಸಲಾಗುತ್ತೆ. ನಂತರ ಅದನ್ನ ಕನ್ನಡಕ್ಕೆ ಅನುವಾದಿಸಲಾಗುತ್ತೆ. ಇದರಿಂದ ಆಗೋ ಪ್ರಯೋಜನವೆಂದರೆ, ಇಂಗ್ಲಿಷ್ ಪದ ಮೊದಲೇ ಬಾಯಿಪಾಠ ಆಗಿ ನಂತರ ಕನ್ನಡದ ತರ್ಜುಮೆ ಆಗೋದ್ರಿಂದ ಇಂಗ್ಲಿಷ್ ಭಾಷಾ ಕಲಿಕೆ ಸುಲಭವಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ 2 ಪಾಳಿಗಳಲ್ಲಿ ಅಂಧ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲಾಗುತ್ತಿದೆ.

ಆಶಾಕಿರಣ ಟ್ರಸ್ಟ್ ನ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಅವರ ಮುತುವರ್ಜಿ ಹಾಗೂ ಆಸಕ್ತಿಯಿಂದ ಈ ಭಾಷ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದೆ. ಇದಲ್ಲದೇ ಅಂಧ ವಿದ್ಯಾರ್ಥಿಗಳಿಗಾಗಿ ನರ್ಸರಿ ತರಬೇತಿ, ಸಾವಯವ ಗೊಬ್ಬರ ತಯಾರಿಕೆಯನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ತರಬೇತಿ ನೀಡಲು ಮುಂದಾಗಿದೆ. ಅಂಧರು ಈ ತರಬೇತಿ ಪಡೆದರೆ ಮುಂದೆ ಯಾರ ಸಹಾಯವಿಲ್ಲದೇ ಸ್ವಾವಲಂಬಿ ಬದುಕು ಸಾಗಿಸಲು ಇದು ಸಹಾಯವಾಗಲಿದೆ ಎಂಬುದು ಟ್ರಸ್ಟ್ ನವರ ಆಶಯ.

ಒಟ್ಟಿನಲ್ಲಿ ಆಶಾಕಿರಣ ಟ್ರಸ್ಟ್, ಹೆಸರಿಗೆ ತಕ್ಕಂತೆ ಅಂಧ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ ಕೆಲಸ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯ. ಲಯನ್ಸ್ ಕ್ಲಬ್ ಕೂಡ ಇವರ ಈ ಕಾರ್ಯಕ್ಕೆ ಕೈ ಜೋಡಿಸಿದ್ದು, ಅಂಧ ವಿದ್ಯಾರ್ಥಿಗಳಿಗಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಅನುಕೂಲ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಂಧರ ಕಣ್ಣಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದು ರಾಜ್ಯದಲ್ಲೇ ಮೊದಲಬಾರಿ ಈ ಪ್ರಯೋಗ ಯಶಸ್ಸು ಕಂಡಿದೆ.

Leave a Reply