ಅನರ್ಹ ಬೆನ್ನಲ್ಲೇ ಬೆಂಗ್ಳೂರಿಗೆ ಐವರು ಅತೃಪ್ತರು ವಾಪಸ್

ಬೆಂಗಳೂರು: ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ಅವರು 14 ಮಂದಿ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಬೆನ್ನಲ್ಲೇ ಭಾನುವಾರ ರಾತ್ರಿ ಐವರು ಅತೃಪ್ತರು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.

ರಾತ್ರಿ 12.50ರ ಸುಮಾರಿಗೆ ಕೆಂಪೇಗೌಡ ಏರ್ ಪೋರ್ಟಿಗೆ ಬೈರತಿ ಬಸವರಾಜು, ಎಸ್.ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮುನಿರತ್ನ ಹಾಗೂ ಎಂ ಟಿಬಿ ನಾಗರಾಜ್  ಬಂದಿದ್ದಾರೆ.

ಮೊದಲು ಬಂದ ನಾಲ್ವರು ಅನರ್ಹರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೊರಟಿದ್ದಾರೆ. ಸುಮಾರು 15 ನಿಮಿಷಗಳ ಬಳಿಕ ಒಬ್ಬಂಟಿಯಾಗಿ ಬಂದ ಎಂಟಿಬಿ ನಾಗರಾಜ್ ಅವರು, ನಾನು ಮುಂಬೈಯಿಂದ ಒಬ್ಬನೇ ಬಂದೆ. ಮುಂದೆ ನಾಲ್ಕು ಜನ ಹೋದರು. ಇನ್ನುಳಿದವರು ಮುಂಬೈನಲ್ಲಿದ್ದಾರೆ. ದೆಹಲಿಗೆ ಹೋಗಿ ಸುಪ್ರಿಂಕೋರ್ಟಿಗೆ ಅರ್ಜಿ ಹಾಕುತ್ತಾರೆ. ಸ್ಪೀಕರ್ ಅನರ್ಹ ಆದೇಶ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಅಂದರು. ಇದೇ ವೇಳೆ ಡಿಕೆ ಶಿವಕುಮಾರ್ ಹೊಸಕೋಟೆಗೆ ಬರಲಿ, ಸಂತೋಷದಿಂದ ನಿಮ್ಮ ಸವಾಲನ್ನ ಸ್ವೀಕಾರ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಅನರ್ಹರು ಏರ್ ಪೋರ್ಟಿನಿಂದ ಹೊರಬಂದ ಬಳಿಕ ಆರ್.ಅಶೋಕ್, ಅಶ್ವತ್ ನಾರಾಯಣ್ ಕೂಡ ಆಗಮಿಸಿದ್ದಾರೆ. ಇವರ ಜೊತೆ ಪಕ್ಷೇತರ ಶಾಸಕ ನಾಗೇಶ್ ಕೂಡ ಬಂದಿದ್ದು, ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾರೆ.

ಗುರುವಾರದಂದು ಸಂಜೆ ಸುದ್ದಿಗೋಷ್ಠಿ ಕರೆದಿದ್ದ ಸ್ಪೀಕರ್ ಅವರು ಕಾಂಗ್ರೆಸ್ಸಿನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ರಾಣೆಬೆನ್ನೂರು ಶಾಸಕ ಆರ್ ಶಂಕರ್ ಅವರನ್ನು ಅನರ್ಹ ಗೊಳಿಸಿದ್ದರು. ಆ ಬಳಿಕ ಇಂದು ಮತ್ತೆ ಸುದ್ದಿಗೋಷ್ಠಿ ಕರೆದು, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಹೀಗೆ ಎಲ್ಲ 14 ಶಾಸಕರನ್ನೂ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

ಒಟ್ಟಿನಲ್ಲಿ 14 ಮತ್ತು 3 ಒಟ್ಟು 17 ಮಂದಿ ಶಾಸಕರು ಅನರ್ಹಗೊಂಡಿದ್ದು, ಇದರಲ್ಲಿ ಮೂವರು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಮತ್ತೆ 14 ಮಂದಿ ಇಂದು ಸುಪ್ರೀಂ ಕದ ತಟ್ಟಲಿದ್ದಾರೆ. ಹೀಗಾಗಿ ಕೋರ್ಟ್ 17 ಮಂದಿಯ ಕೇಸನ್ನು ಒಟ್ಟಿಗೆ ತೆಗೆದುಕೊಂಡು ಏನ್ ತೀರ್ಪು ಕೊಡುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *