ರಾಜಕಾರಣಿಗಳಿಂದ `ಚಿನ್ನ’ದಂತಾ ಮೋಸ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು `ಗೋಲ್ಡ್’ ಸೀಕ್ರೆಟ್

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳಂತೂ ಗೆಲ್ಲಲೇಬೆಕೆಂದು ಹರಸಾಹಸ ಪಡುತ್ತಿದ್ದಾರೆ. ಕೆಲವೊಂದು ಕಡೆ ಹಣ, ಬಂಗಾರ ನೀಡುವ ಆಮಿಷಗಳೂ ನಡೀತಾ ಇದೆ ಅನ್ನೋ ಮಾತುಗಳೂ ಕೇಳಿಬಂದಿವೆ. ಆದರೆ ರಾಜಕಾರಣಿಗಳು ಕೊಡುವ ಚಿನ್ನವನ್ನು ನಂಬಿ ವೋಟ್ ಹಾಕಿದರೆ ನೀವು ಮೋಸ ಹೋಗುವುದು ಪಕ್ಕಾ ಎಂಬುದು ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಹೌದು. ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ವೋಟಿಗಾಗಿ ಮಹಿಳೆಯರಿಗೆ ಬಂಗಾರದ ಮೂಗುತಿ, ಕಿವಿಯೋಲೆಯನ್ನು ಹಂಚುವ ಕಳ್ಳ ಕೆಲಸಗಳು ನಡೆಯುತ್ತವೆ. ಹೀಗೆ “ಏನೋ ಬಂಗಾರ ಕೊಟ್ರು ಬುಡು ಅತ್ಲಾಗೆ, ಒಂದು ವೋಟು ಕೊಟ್ಟೆಬುಡುವಾ” ಎಂದು ಮಹಿಳೆಯರು ಮತ ಮಾರಿಕೊಂಡರೆ ನೀವು ಕೆಟ್ರಿ ಅಂತಾನೇ ಅರ್ಥ. ಯಾಕಂದರೆ ಮಹಿಳೆಯರನ್ನು ಯಾಮಾರಿಸೋಕೆ ಚಿನ್ನದಂತೆ ಕಾಣುವ ಅಗ್ಗದ ರೇಟಿನ ಕಾಗೆ ಬಂಗಾರವನ್ನು ಹಂಚಲಾಗುತ್ತಿದೆ. ಶೇ.65 ರಷ್ಟು ತಾಮ್ರ ಮಿಕ್ಸ್, ಚಿನ್ನದ ಲೇಪನವಿರುವ ನಕಲಿ ಚಿನ್ನವನ್ನು ರಾಜಕೀಯ ನಾಯಕರು ಕೈಗಿಡುತ್ತಿದ್ದಾರೆ. ಚುನಾವಣೆ ವೇಳೆ ಹಂಚೋಕೆ ಅಂತಾನೇ ಮೂಗುತಿ ಬೇಕೆಂದು ಗೋಲ್ಡ್ ಶಾಪ್‍ನಲ್ಲಿ ವಿಚಾರಿಸಿದ್ದೇ ತಡ, ನಕಲಿ ಬಂಗಾರದ ಅಸಲಿ ಸೀಕ್ರೆಟ್ ಹೊರಬಂದಿದೆ.

ಪ್ರತಿನಿಧಿ: ಎಲೆಕ್ಷನ್‍ಗೆ ಹಂಚೋಕೆ ಮೂಗುತಿ ಬೇಕು.
ಶಾಪ್ ಮಾಲೀಕ: ಹಾ ಕೊಡೋಣ..
ಪ್ರತಿನಿಧಿ: ಇದೆಲ್ಲ ಪ್ಯೂರ್ ಬಂಗಾರನಾ..?
ಶಾಪ್ ಮಾಲೀಕ: ಇದೆಲ್ಲ ಬಂದು 35 ಪರ್ಸೆಂಟ್ ಅಷ್ಟೇ.. ಮಿಕ್ಕಿದೆಲ್ಲ ಕಾಪರ್..! ನಾನು ಮುಂಚೆ ರಾಜಕೀಯ ನಾಯಕರಿಗೆ ತುಂಬಾ ಮಾಡಿಸಿದ್ದೀನಿ..
ಪ್ರತಿನಿಧಿ: ಬಜೆಟ್ ಎಷ್ಟು ಅಂತ ಹೇಳಿ..?
ಶಾಪ್ ಮಾಲೀಕ: ಇನ್ನೊಂದು ಝೀರೋ ಪರ್ಸೆಂಟ್ ಬರುತ್ತೆ ಗೋಲ್ಡ್ ಪ್ಲೇಟಿಂಗ್, ಬಟ್ ನಾವು ಮಾಡಲ್ಲ
ಪ್ರತಿನಿಧಿ: ಇದ್ರ ಪ್ರೈಸ್ ಎಷ್ಟು..?
ಶಾಪ್ ಮಾಲೀಕ: ಅಲ್ಲ, ಮಾಡಲ್ಲ, ಬಟ್ ಟೋಟಲ್ 30 ರೂಪಾಯಿ ಕಡಿಮೆಯಾಗುತ್ತೆ
ಪ್ರತಿನಿಧಿ: ಈಗ ಇದಕ್ಕೆ ಎಷ್ಟು ಅಡ್ವಾನ್ಸ್ ಕೊಡಬೇಕು..?
ಶಾಪ್ ಮಾಲೀಕ: ಶೇ 80 ಕೊಡಬೇಕು.. ಒಂದು ಲಕ್ಷದ ನಲವತ್ತು ಸಾವಿರ ಆಗಬಹುದು, ಒಂದು ಲಕ್ಷ ಕೊಟ್ರೂ ಮಾಡಿಕೊಡ್ತೀನಿ ಬಟ್ ಹದಿನೈದು ದಿನ ಟೈಂ ಕೊಟ್ರೆ ಚೆನ್ನಾಗಿ ಮಾಡಿಕೊಡ್ತೀವಿ, ಯಾವತ್ತಿಗೆ ಬೇಕು ನಿಮ್ಗೆ..?

ಪ್ರತಿನಿಧಿ: 5 ರೊಳಗೆ ಕೊಡಬೇಕು..
ಶಾಪ್ ಮಾಲೀಕ: ಹಾಗಿದ್ರೆ ಜಲ್ದಿ ಹೇಳಿ. ಇಲ್ ನೋಡಿ ಇದು ವಯಸ್ಸಾದವರಿಗೆ, ಫೋರ್ ಸ್ಟೋನ್‍ದು ಬರುತ್ತೆ. ಒಂದು ಸಾವಿರದ ಇನ್ನೂರು ರೂಪಾಯಿ..
ಪ್ರತಿನಿಧಿ: ಇದ್ರಲ್ಲಿ ಎಷ್ಟು ಚಿನ್ನ ಇರುತ್ತೆ..?
ಶಾಪ್ ಮಾಲೀಕ: ಇದ್ರಲ್ಲೂ ಮೂವತ್ತೈದು ಪರ್ಸೆಂಟ್..! ಇದು ನಾವೇ ತಯಾರಿ ಮಾಡೋದು. ನಮ್ದೇ ಫ್ಯಾಕ್ಟರಿ ಇದೆ. ಅದಕ್ಕೆ ಆ ರೇಟ್‍ಗೆ ಸಿಗುತ್ತೆ. ಪ್ಲೇಟಿಂಗ್‍ದು ನಾನ್ ಹೇಳಿದ್ದೀನಿ ಓಪನ್ ಆಗಿಯೇ. ಇದು ಸೆನ್ಸಿಟಿವ್ ಮ್ಯಾಟರ್ ಹುಷಾರ್ ಆಗಿರಬೇಕು.

ಹೀಗೆ ಬಿಳಿ ಬಟ್ಟೆಯ ರಾಜಕೀಯ ನಾಯಕರು ಸುಳ್ಳು ಭರವಸೆ ಹೇಳಿ ಅಂಗೈಯಲ್ಲಿ ಅರಮನೆ ತೋರಿಸೋದು ಮಾತ್ರವಲ್ಲ, ಡೂಪ್ಲಿಕೇಟ್ ಬಂಗಾರ ಕೊಟ್ಟು ಮಹಿಳೆಯರಿಗೆ ಟೋಪಿ ಹಾಕ್ತಿದ್ದಾರೆ.

ಪಬ್ಲಿಕ್ ಟಿವಿ ತಂಡ ಮತ್ತೊಂದು ಶಾಪ್ ಗೆ ಹೋಗಿ ಮಾತನಾಡಿಸಿದಾಗ, ಅಲ್ಲಿ ಎಲೆಕ್ಷನ್ ಚಿನ್ನದ ಖರೀದಿಗೆ ಬಿಲ್ ಕೊಡೋದಿಲ್ವಂತೆ. ಟ್ಯಾಕ್ಸ್ ಗೀಕ್ಸ್ ಏನೂ ಬೇಕಾಗಿಲ್ಲ. ವಿತ್ ಬಿಲ್, ವಿತೌಟ್ ಬಿಲ್ ಯಾವುದು ಬೇಕು ಹೇಳಿ ಅಂತ ಬೇರೆ ಬಂಗಾರದ ಅಂಗಡಿ ಮಾಲೀಕರು ಆಫರ್ ಕೊಡುತ್ತಾರೆ. ಒಟ್ಟಿನಲ್ಲಿ ಚುನಾವಣಾ ಅಖಾಡದಲ್ಲಿ ಮತದಾರರ ಓಲೈಕೆಗಾಗಿ ಮಾಡುವ ಖತರ್ನಾಕ್ ಐಡಿಯಾಗಳನ್ನು ರಾಜಕರಾಣಿಗಳು ಉಪಯೋಗಿಸಿಕೊಳ್ಳುತ್ತಾರೆ.

Comments

Leave a Reply

Your email address will not be published. Required fields are marked *