ಮಹಾ ನೆಲದಲ್ಲೇ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆಯಲು ಮುಂದಾದ ವಿದ್ಯಾವರ್ಧಕ ಸಂಘ

ಧಾರವಾಡ: ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ಸಿನ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮತ್ತೆ ಕರ್ನಾಟಕ-ಮಹಾರಾಷ್ಟ್ರ ಗಡಿ ಕ್ಯಾತೆ ತೆಗೆದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಹಾರಾಷ್ಟ್ರದ ನೆಲದಲ್ಲಿಯೇ ಕನ್ನಡ ಸಂಘಟನೆಗಳ ಮಹಾಮೇಳವನ್ನು ನಡೆಸಿ, ಗಡಿ ವಿಷಯ ಕುರಿತ ಮಹತ್ವದ ನಿರ್ಣಯವೊಂದನ್ನು ಮಂಡಿಸುವ ದಿಟ್ಟ ನಿರ್ಧಾರಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂದಾಗಿದೆ.

ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಇದೇ ಡಿಸೆಂಬರ್ 21 ಮತ್ತು 22ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಅಖಿಲ ಭಾರತ ಕನ್ನಡ ಸಂಘಗಳ 8ನೇ ಮಹಾಮೇಳ ಆಯೋಜಿಸಲಾಗಿದೆ. ಈ ಮಹಾಮೇಳದ ಸಮಾರೋಪದಲ್ಲಿಯೇ ಗಡಿ ವಿಷಯ ಕುರಿತ ಮಹತ್ವದ ನಿರ್ಣಯವೊಂದನ್ನು ಮಂಡಿಸುವ ಸುಳಿವನ್ನು ವಿದ್ಯಾವರ್ಧಕ ಸಂಘ ನೀಡಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಸಾಕಷ್ಟು ಕ್ಲಿಷ್ಟಕರ ಪ್ರಕರಣಗಳನ್ನು ಇತ್ಯರ್ಥ ಮಾಡಿದೆ. ಇದನ್ನು ಸಹ ಅದೇ ರೀತಿ ಪರಿಗಣಿಸಿ ಕೂಡಲೇ ಇತ್ಯರ್ಥ ಮಾಡಿ ಎಂದು ಕೋರಿದರು.

ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದಷ್ಟು ಕರ್ನಾಟಕ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ. ಹೀಗಾಗಿ ಮಹಾಮೇಳದಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮಹಾಮೇಳದ ಬಳಿಕ ಕರ್ನಾಟಕ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಸಾಧ್ಯವಾದರೆ ಮತ್ತೊಂದು ಹೋರಾಟಕ್ಕೂ ಮುಂದಾಗುತ್ತೇವೆ ಎಂದು ಪ್ರಕಾಶ ಉಡಿಕೇರಿ ತಿಳಿಸಿದರು.

Comments

Leave a Reply

Your email address will not be published. Required fields are marked *