ಬುಧವಾರ ಸಿಎಂ ಆಗಿ ಹೆಚ್‍ಡಿಕೆ ಪ್ರಮಾಣವಚನ- ಕಾಂಗ್ರೆಸ್‍ಗೆ 20, ಜೆಡಿಎಸ್ ಗೆ 12 ಸಚಿವ ಸ್ಥಾನ

ಬೆಂಗಳೂರು: ಐಪಿಎಲ್ ಮ್ಯಾಚ್‍ಗಿಂತಲೂ ರೋಚಕವಾಗಿದ್ದ ಶನಿವಾರ ರಾಜಕೀಯ ಘಟ್ಟ ಮುಗಿದಿದೆ. ಬೆಂಗಳೂರಲ್ಲಿ ಮಳೆ ಬಂದು ಇಳೆ ಕೂಡ ತಂಪಾಗಿದೆ. ಆದ್ರೆ ರಾಜ್ಯ ರಾಜಕೀಯದಲ್ಲಿನ ಕಾವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ನೂತನ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ಮೂಲಕ ಕುಮಾರಪರ್ವಕ್ಕೆ ಚಾಲನೆ ಸಿಗಬೇಕಿದೆ.

ಮೊದಲು ಸೋಮವಾರ ನಿಗದಿಯಾಗಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ಎರಡು ಕಾರಣಗಳಿಂದಾಗಿ ಎರಡು ದಿನ ತಡವಾಗಿ ನಡೆಯಲಿದೆ. ನಾಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಇರುವ ಹಿನ್ನೆಲೆಯಲ್ಲಿ ಮೈತ್ರಿ ಧರ್ಮ ಪಾಲಿಸಿರುವ ಕುಮಾರಸ್ವಾಮಿ, ಕಾರ್ಯಕ್ರಮ ಮುಂದೂಡಿದ್ದಾರೆ. ನಾಡಿದ್ದು ಮಂಗಳವಾರ.. ಇದು ಶುಭಸೂಚಕವಲ್ಲ. ಹೀಗಾಗಿ ಬುಧವಾರ ಮಧ್ಯಾಹ್ನ 12ರಿಂದ 1 ಗಂಟೆ ಒಳಗೆ ಹೆಚ್ಡಿಕೆ ಸಿಎಂ ಆಗಲಿದ್ದಾರೆ. ಇದನ್ನೂ ಓದಿ: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ: ಅಧಿಕಾರ ಸೂತ್ರ ಹೇಗಿರಲಿದೆ? ಸವಾಲುಗಳು ಏನು?

ಸಿಎಂ ಪ್ರಮಾಣವಚನ ಸಮಾರಂಭ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಲಕ್ಷಾಂತರ ಮಂದಿ ಕಾರ್ಯಕರ್ತರು ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ. ಐದು ವರ್ಷಗಳ ಹಿಂದೆ ಸಿದ್ದರಾಮಯ್ಯ ಕೂಡ ಸಿಎಂ ಆಗಿ ಇಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ರು. ಇನ್ನು ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶವನ್ನು ರಾಜ್ಯಪಾಲರು ನೀಡಿದ್ದಾರೆ. ಆದ್ರೆ, ಸಿಎಂ ಆದ ಒಂದೆರಡು ದಿನಗಳಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಹೆಚ್‍ಡಿಕೆ ರೆಡಿ ಆಗಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಇಂದು ದೆಹಲಿಗೆ ತೆರಳುವ ಬಗ್ಗೆ ದಿನ ನಿಗದಿಯಾಗಿತ್ತು. ಆದರ ಬದಲು ನಾಳೆ ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಆಹ್ವಾನ ನೀಡುವ ಸಾಧ್ಯತೆಯಿದೆ. ಇನ್ನು ಬಿಎಸ್‍ಪಿ ನಾಯಕಿ ಮಾಯಾವತಿ, ಎಸ್‍ಪಿಯ ಅಖಿಲೇಶ್ ಯಾದವ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ , ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿ ಎಡವಿದ್ದು ಎಲ್ಲಿ? ಪಕ್ಷದ ಮುಂದಿನ ನಡೆ ಏನು?

ತಂದೆಯ ಆಶೀರ್ವಾದ: ಮೇ 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರೋ ಹೆಚ್.ಡಿ ಕುಮಾರಸ್ವಾಮಿ ತಂದೆ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ ದೇವೇಗೌಡರ ನಿವಾಸ ಅಮೋಘಕ್ಕೆ ಭೇಟಿ ಕೊಟ್ಟ ಕುಮಾರಸ್ವಾಮಿ ತಮ್ಮ ತಂದೆಯ ಆಶೀರ್ವಾದ ಪಡೆದರು. ಮತ್ತೊಂದೆಡೆ ಒಂದು ಕಾಲದ ವೈರಿಗಳಾದ ಡಿಕೆ ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅಶೋಕ್ ಹೋಟೆಲ್‍ನಲ್ಲಿ ಸಭೆ ಮುಗಿಸಿ ಒಂದೇ ಕಾರಿನಲ್ಲಿ ತೆರಳಿದ್ರು.

Comments

Leave a Reply

Your email address will not be published. Required fields are marked *