ರಾಜ್ಯಸಭೆಗೆ ಬಿಜೆಪಿಯ ಒಬ್ಬರು, ಕಾಂಗ್ರೆಸ್‍ ನ ಮೂವರು – ಜೆಡಿಎಸ್‍ಗೆ ಎರಡನೇ ಬಾರಿ ಸೋಲು

ಬೆಂಗಳೂರು: ರಾಜ್ಯದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಚುನಾವಣೆ ಗೊಂದಲ, ಗಲಾಟೆ ಜೊತೆಗೆ ಜೆಡಿಎಸ್‍ನಿಂದ ಬಹಿಷ್ಕಾರದಂತ ಕಠಿಣ ನಡೆಯಿಂದ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ನ ಎಲ್. ಹನುಮಂತಯ್ಯ(44), ನಸೀರ್ ಹುಸೇನ್ (42), ಜಿಸಿ ಚಂದ್ರಶೇಖರ್(46) ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್(50) ಜಯಶೀಲರಾಗಿದ್ದಾರೆ.

ಕಾಂಗ್ರೆಸ್ ನಾಯಕರು ಸೇರಿದಂತೆ ಬಿಜೆಪಿಯ ಸಿಪಿ ಯೋಗೇಶ್ವರ್, ಪಾಟೀಲ್ ನಡಹಳ್ಳಿ ಸೇರಿದಂತೆ ಹಲವು ನಾಯಕರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಿದರು. ಬಿಜೆಪಿಯಲ್ಲಿ ಯಾವುದೇ ಗೊಂದಲ್ಲ ಇರಲಿಲ್ಲ. ಆದರೆ ಕಾಂಗ್ರೆಸ್‍ನಲ್ಲಿ ಕೆಲಕಾಲ ತಳಮಳ ಉಂಟಾಗಿತ್ತು. ಕಾರಣ ಮಧ್ಯಾಹ್ನ ಆದರು ಶಾಸಕ ಅಂಬರೀಶ್, ಶಾಮನೂರು ಶಿವಶಂಕರಪ್ಪ, ಎಸ್‍ಎಸ್ ಮಲ್ಲಿಕಾರ್ಜುನ್ ಮತ ಚಲಾಯಿಸಲು ಆಗಮಿಸಿರಲಿಲ್ಲ. ನಂತರ ಸಂಜೆ ವೇಳೆಗೆ ಬಂದು ಮತ ಚಲಾಯಿಸಿದ್ರು.

ವಿಶೇಷವಾಗಿ ಎಂಇಎಸ್ ಶಾಸಕ ಸಾಂಬಾಜಿ ಪಾಟೀಲ್‍ಗೆ ಕೈ ನಡುಗುತ್ತಿದೆ ಎಂದು ಲಕ್ಷ್ಮಿನಾರಾಯಣ್ ಮತ ಚಲಾಯಿಸಲು ಅಗಮಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಂಬಾಜಿ ಪಾಟೀಲ್ ಮೊದಲು ವೈದ್ಯರ ಸರ್ಟಿಫಿಕೇಟ್ ಕೊಟ್ಟು ಬಳಿಕ ಬೇರೆಯವರ ಕೈಲಿ ಮತ ಚಲಾಯಿಸಲಿ ಎಂದು ಕಿಡಿಕಾರಿದರು. ಬಳಿಕ ಸಾಂಬಾಜಿ ಪಾಟೀಲ್ ಅವರೇ ಮತ ಚಲಾಯಿಸಿದರು. ಇದರ ಮಧ್ಯೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ರಾಮಕೃಷ್ಣ ಅವರ ಕೈ ಹಿಡಿದು ಸಚಿವ ಪ್ರಿಯಾಂಕ್ ಖರ್ಗೆ ಮತ ಚಲಾಯಿಸಿದರು.

ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಪಕ್ಷದ ಅಭ್ಯರ್ಥಿ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಡವಟ್ಟು ಮಾಡಿದ್ದರು. ಈ ವೇಳೆ ಕಾಂಗ್ರೆಸ್ ಏಜೆಂಟ್ ಎಚ್ಚರಿಸಿದ ಬಳಿಕ ಚುನಾವಣಾ ಅಧಿಕಾರಿಗಳಿಂದ ಹೊಸದಾಗಿ ಬ್ಯಾಲೆಟ್ ಪೇಪರ್ ಪಡೆದು ಮತ ಚಲಾಯಿಸಿದರು. ಈ ನಡೆಗೆ ಜೆಡಿಎಸ್ ನಾಯಕರು ಚುನಾವಣಾ ಅಧಿಕಾರಿ ವಿ.ಮೂರ್ತಿ ಅವರು ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್ ಅವರಿಗೆ 2ನೇ ಬಾರಿಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಎರಡು ಮತಗಳನ್ನು ಅಸಿಂಧುಗೊಳಿಸಿ ಎಂದು ರಾಜ್ಯ ಚುನಾವಣಾ ಅಧಿಕಾರಿಗೆ ಜೆಡಿಎಸ್ ಅಭ್ಯರ್ಥಿ ಫಾರೂಕ್ ದೂರು ನೀಡಿದರು. ಆಕಸ್ಮಿಕವಾಗಿ ಆಗಿರುವ ತಪ್ಪನ್ನು ಪರಿಗಣಿಸಲು ಸಾಧ್ಯವಿಲ್ಲ, ಆಕಸ್ಮಿಕ ತಪ್ಪಿನ ಬಗ್ಗೆ ಎಲ್ಲರಿಗೂ ಮನವರಿಕೆವಾಗಬೇಕು ಎಂದು ಅಭಿಪ್ರಾಯಪಟ್ಟ ಚುನಾವಣಾ ಆಯೋಗ ಎರಡು ಮತಗಳನ್ನು ತಿರಸ್ಕರಿಸಿತು.

ಈ ಎಲ್ಲಾ ಗೊಂದಲದ ಮಧ್ಯೆ ತಮ್ಮ ರಾಜಕೀಯ, ಪಕ್ಷ ನಿಷ್ಠೆಯನ್ನ ಮೆರೆದ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ತಮ್ಮ ತಂದೆಯ ಅಗಲಿಕೆ ನಡುವೆಯೂ ಮತ ಚಲಾಯಿಸಿದರು. ಬಳಿಕ ಹೆಲಿಕಾಪ್ಟರ್ ಮೂಲಕ ಬೆಳಗಾವಿಯ ರಾಮದುರ್ಗಕ್ಕೆ ತೆರಳಿದರು. ಆರೋಗ್ಯ ಹದಗೆಟ್ಟು ವಿಕ್ರಂ ಆಸ್ಪತ್ರೆಯಲ್ಲಿದ್ದ ಬೇಲೂರು ಶಾಸಕ ರುದ್ರೇಶ್‍ಗೌಡರನ್ನು ವ್ಹೀಲ್ ಚೇರ್‍ನಲ್ಲಿ ಕೂರಿಸಿ ವಿಧಾನಸೌಧಕ್ಕೆ ಕರೆತರಲು ಕಾಂಗ್ರೆಸ್ ಯತ್ನಿಸಿತ್ತು. ಆದರೆ ವೈದ್ಯರು ಇದಕ್ಕೆ ಅವಕಾಶ ನೀಡಿಲ್ಲ.

Comments

Leave a Reply

Your email address will not be published. Required fields are marked *