ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

– ಸರ್ಕಾರದಿಂದಲೇ ಉಚಿತ ಸಾಮೂಹಿಕ ಮದುವೆ
– ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ
– ಎ ದರ್ಜೆಯ 100 ದೇವಾಲಯದಲ್ಲಿ ಕಾರ್ಯಕ್ರಮ

ಬೆಂಗಳೂರು: ಯಡಿಯೂರಪ್ಪ ಸರ್ಕಾರದಿಂದ ಜೋಡಿಗಳಿಗೆ ಮದುವೆ ಭಾಗ್ಯವನ್ನು ಕಲ್ಪಿಸಿದೆ. ಮುಜರಾಯಿ ಇಲಾಖೆಯ ಎ ದರ್ಜೆ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ಸರ್ಕಾರ ಪ್ರಕಟಿಸಿದೆ.

ಒಂದೊಂದು ದೇವಾಲಯದಲ್ಲಿ 100 ಜೋಡಿಗೆ ಮದುವೆ ಮಾಡಿಸುವ ಗುರಿಯನ್ನು ಹಾಕಲಾಗಿದ್ದು, ಪ್ರತಿ ವರ್ಷ 10 ಸಾವಿರ ಜೋಡಿಗೆ ವಿವಾಹ ನಡೆಸಲು ಚಿಂತನೆ ನಡೆದಿದೆ. ಜಾತಿಭೇದವಿಲ್ಲದೇ ಎಲ್ಲಾ ವರ್ಗದ ಬಡವರಿಗಾಗಿ ಯೋಜನೆ ರೂಪಿಸಲಾಗಿದ್ದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ.

ಪ್ರತಿ ಜೋಡಿಗೆ ವಿವಾಹಕ್ಕೆ 55 ಸಾವಿರ ಖರ್ಚಿನ ಅಂದಾಜು ಮಾಡಲಾಗಿದ್ದು ಯೋಜನೆಗೆ ಪ್ರತಿ ವರ್ಷ 25-30 ಕೋಟಿ ವೆಚ್ಚ ಮಾಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದಲೇ ವಸ್ತ್ರ, ಮಾಂಗಲ್ಯ ನೀಡಲಾಗುತ್ತದೆ.

ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಈ ಸಂಬಂಧ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಿ ಮದುವೆಯ ವಿವರ ನೀಡಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರದಿಂದಲೇ ಸಾಮೂಹಿಕ ಮದುವೆ ಮಾಡುತ್ತೇವೆ. ಎ ದರ್ಜೆಯ 90-100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನಡೆಯಲಿದ್ದು, ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ ಎಂದು ತಿಳಿಸಿದರು.

ಷರತ್ತುಗಳು ಏನು?
30 ದಿನಗಳ ಮೊದಲು ನೋಂದಣಿ ಮಾಡಿಕೊಳ್ಳಬೇಕು ಮತ್ತು ವಧು-ವರರ ಪೋಷಕರು ಮದುವೆಯಲ್ಲಿ ಭಾಗವಹಿಸಬೇಕು. ಪೋಷಕರು ವಧು-ವರರ ದಾಖಲೆಯನ್ನು ನೀಡಬೇಕಾಗುತ್ತದೆ. ಪರೋಕ್ಷವಾಗಿ ಪ್ರೀತಿಸಿ ಮದುವೆ ಆಗುವ ಮಂದಿಗೆ ಅವಕಾಶವಿಲ್ಲ. ಎರಡನೇ ಮದುವೆಗೆ ಅವಕಾಶ ಇಲ್ಲ. ಕಡ್ಡಾಯವಾಗಿ ವರನಿಗೆ 21, ವಧುವಿಗೆ 18 ವರ್ಷ ಆಗಿರಲೇಬೇಕು. ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ನಡೆಯುತ್ತದೆ.

ಶಿಶು ಕಲ್ಯಾಣ ಇಲಾಖೆಯಿಂದ ಪ್ರೊತ್ಸಾಹ ಧನ ನೀಡಲಾಗುತ್ತದೆ. 40 ಸಾವಿರ ವೆಚ್ಚದಲ್ಲಿ 8 ಗ್ರಾಂ ಚಿನ್ನದ ತಾಳಿ ವರನಿಗೆ ವಸ್ತ್ರಕ್ಕಾಗಿ 5 ಸಾವಿರ ರೂ., ವಧುವಿಗೆ ಸೀರೆಗಾಗಿ 10 ಸಾವಿರ ರೂ. ನೀಡಲಾಗುತ್ತದೆ. ಹಣವನ್ನು ಮದುವೆಯ ನಂತರ ಬ್ಯಾಂಕ್ ಖಾತೆ ಜಮೆ ಮಾಡಲಾಗುತ್ತದೆ.

ವರ್ಷಕ್ಕೆ ಒಂದು ಸಾವಿರ ಸಾಮೂಹಿಕ ವಿವಾಹ ಮಾಡುವ ಯೋಚನೆಯನ್ನು ಸರ್ಕಾರ ರೂಪಿಸಿದ್ದು ತಂದೆ ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ವಿವಾಹಕ್ಕೆ ಸೂಕ್ತ ದಾಖಲೆಗಳು ಸಲ್ಲಿಕೆ ಕಡ್ಡಾಯವಾಗಿದ್ದು ಕೊಲ್ಲೂರು ಮೂಕಾಂಬಿಕೆ, ಬನಶಂಕರಿ ದೇವಾಲಯ, ಮೈಸೂರಿನ ಚಾಮುಂಡಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಎ ವಲಯದ ದೇವಾಲಯಗಳನ್ನು ಸಾಮೂಹಿಕ ವಿವಾಹಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

Comments

Leave a Reply

Your email address will not be published. Required fields are marked *