ಸಿದ್ದರಾಮಯ್ಯನವರ ಹೆಗಲಿಗೆ ‘ಲೋಕ’ ಜವಾಬ್ದಾರಿ!

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಬಲ್ಯ ಹೆಚ್ಚಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ನೀಡಿದೆ.

ಕಳೆದ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಸ್ವಲ್ಪಮಟ್ಟಿಗೆ ಮೂಲೆಗುಂಪಾಗಿದ್ದ ಸಿದ್ದರಾಮಯ್ಯ ಈಗ ಮತ್ತೆ ಪಕ್ಷದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಬಿಜೆಪಿಯನ್ನು ಕಟ್ಟಿ ಹಾಕಲು ‘ಮಹಾಘಟ ಬಂಧನ್’ಗೆ ಕಾಂಗ್ರೆಸ್ ಮುಂದಾಗಿದ್ದು, ಒಂದು ವೇಳೆ, ಇದು ಸಾಧ್ಯವಾಗದಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸಲು ನಿರ್ಧರಿಸಿದೆ. ಹೀಗಾಗಿ ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಸಿದ್ದರಾಮಯ್ಯರವರೇ ಸೂಕ್ತ ವ್ಯಕ್ತಿ ಅನ್ನೋ ನಿರ್ಧಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಿದ್ದಾರೆ.

ಸಿದ್ದುಗೆ ನೆರವಾಗಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ಸೂಚಿಸಿದ್ದಾರೆ. ಹೈಕಮಾಂಡ್ ಹೊಸ ಜವಾಬ್ದಾರಿ ವಹಿಸಿರೋದ್ರಿಂದ, ಆಷಾಢದ ಬಳಿಕ ಸಿದ್ದರಾಮಯ್ಯ ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಅಸಮಾಧಾನವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯಗೇಕೆ ‘ಲೋಕ’ ಜವಾಬ್ದಾರಿ…?
2014ರ ಚುನಾವಣೆಯಲ್ಲಿ 9 ಸಂಸದರನ್ನು ಗೆಲ್ಲಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದ್ದು, ಅಹಿಂದ ಮತಗಳನ್ನು ಸೆಳೆಯಬಲ್ಲ ರಾಜ್ಯದ ಏಕೈಕ ನಾಯಕರಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಖರ್ಗೆ ಬ್ಯುಸಿ ಆಗಿದ್ದು ಮೋದಿ ಅಲೆಯನ್ನು ಹಿಮ್ಮೆಟ್ಟಿಸುವ ಶಕ್ತಿ ಸಿದ್ದರಾಮಯ್ಯನವರಿಗಿದೆ ಎನ್ನುವುದನ್ನು ಕಾಂಗ್ರೆಸ್ ಅರಿತಿದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಅನುಭವ ಸ್ವಲ್ಪ ಕಡಿಮೆ ಇದೆ. ಇದರ ಜೊತೆ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾರಣ ಸಿದ್ದರಾಮಯ್ಯನವರಿಗೆ ಈ ಜವಾಬ್ದಾರಿ ಸಿಕ್ಕಿದೆ.

Comments

Leave a Reply

Your email address will not be published. Required fields are marked *