Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

ನವದೆಹಲಿ: ಮಂಡ್ಯದಲ್ಲಿ ಹುಡುಗರ ಮುಂದೆ ʼಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ಪಿಇಎಸ್‌ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ಗೆ ಜಮಾತ್‌ ಉಲೆಮಾ-ಎ-ಹಿಂದ್‌ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

ಕಾಲೇಜಿನಲ್ಲಿ ಹುಡುಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾಗ ಮುಸ್ಕಾನ್‌ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ. ವೈರಲ್‌ ಆದ ಬೆನ್ನಲ್ಲೇ ಜಮಾತ್‌ ಉಲೆಮಾ-ಎ-ಹಿಂದ್‌ ಟ್ವೀಟ್‌ ಮಾಡಿ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

ವಿದ್ಯಾರ್ಥಿನಿ ಹೇಳಿದ್ದೇನು?
ನಾನು ಎಂದಿನಂತೆ ಬುರ್ಕಾ ಧರಿಸಿ ಕಾಲೇಜು ಪ್ರವೇಶಿಸಿದೆ. ಈ ವೇಳೆ ಗುಂಪೊಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿತು. ನಾನು ಪ್ರತಿಯಾಗಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಆ ಗುಂಪಿನಲ್ಲಿದ್ದವರಲ್ಲಿ ಕೇವಲ ಶೇ.10ರಷ್ಟು ಮಂದಿ ಮಾತ್ರ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಉಳಿದ 90 ಪ್ರತಿಶತ ಯುವಕರು ಹೊರಗಿನಿಂದ ಬಂದವರಾಗಿದ್ದರು.

ಶಿಕ್ಷಣವೇ ನಮ್ಮ ಆದ್ಯತೆ. ಆದರೆ ಅವರು ಅದನ್ನೂ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ತುಂಡು ಬಟ್ಟೆ ವಿಚಾರಕ್ಕೆ ನಮ್ಮ ಶಿಕ್ಷಣ ಹಾಳುಮಾಡಲು ಯತ್ನಿಸುತ್ತಿದ್ದಾರೆ. ನಾವು ಯಾವಾಗಲೂ ಬುರ್ಕಾ ಮತ್ತು ಹಿಜಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದೆವು. ಕಾಲೇಜಿಗೆ ಬಂದಾಗ ಬುರ್ಕಾ ತೆಗೆದು, ಹಿಜಬ್ ಮಾತ್ರ ಹಾಕಿಕೊಂಡು ತರಗತಿಯಲ್ಲಿ ಕೂರುತ್ತಿದ್ದೆವು. ಯಾವಾಗಲೂ ಇದಕ್ಕೆ ವಿರೋಧ ಇರಲಿಲ್ಲ. ಆದರೆ ಒಂದು ವಾರದಿಂದ ಹಿಜಬ್‌ಗೂ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಇದನ್ನೂ ಓದಿ: ಸಂವಿಧಾನವೇ ನನಗೆ ಭಗವದ್ಗೀತೆ, ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ: ಹಿಜಬ್‌ ವಿವಾದ ಕೋರ್ಟ್‌ನಲ್ಲಿ ಏನಾಯ್ತು?

ಹಿಜಬ್ ನಮ್ಮ ಭಾಗವೇ ಆಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರೂ ಇದಕ್ಕೆ ಯಾವುದೇ ರೀತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಿಲ್ಲ. ಹೊರಗಿನವರು ಪ್ರತಿರೋಧ ವ್ಯಕ್ತಪಡಿಸಲು ಶುರು ಮಾಡಿದ್ದಾರೆ. ಬುರ್ಕಾವನ್ನು ಹಾಕಿ ಬರಬೇಡಿ ಎಂದು ನಮ್ಮ ಪ್ರಾಂಶುಪಾಲರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮನಿಂದನೆ ಆರೋಪ – ಹಿಂದೂ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಾಕ್!

ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಒಂದು ಭಾಗ ಹಿಜಬ್. ನಾವು ಹಿಜಬ್‌ಗಾಗಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ನಾವಿಲ್ಲಿ ಸುರಕ್ಷಿತವಾಗಿದ್ದೇವೆ. ನಾವು ನಿಮ್ಮೊಟ್ಟಿಗಿದ್ದೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಘಟನೆ ಕುರಿತು ಮಾತನಾಡಿದ್ದಾರೆ.

Comments

Leave a Reply

Your email address will not be published. Required fields are marked *