ಡ್ರೀಮ್ ಇಲೆವೆನ್ ಗೇಮಿಂಗ್ ಆ್ಯಪ್ ಸಂಸ್ಥಾಪಕರ ವಿರುದ್ಧದ ಕೇಸ್ ರದ್ದು

ಬೆಂಗಳೂರು: ರಾಜ್ಯದಲ್ಲಿ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಬಳಿಕ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಕರ ವಿರುದ್ಧ ದಾಖಲಾಗಿದ್ದ ಕೇಸ್‍ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ರಾಜ್ಯ ಸರ್ಕಾರ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ್ದ ಬಳಿಕ ಮುಂಬೈ ಮೂಲದ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಪಕರಾದ ಭವಿತ್ ಸೇಠ್ ಮತ್ತು ಹರ್ಷ್ ಜೈನ್ ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ವಿಚಾರಣೆಗೆ ನಡೆಸಿ ನ್ಯಾ. ಎಮ್ ನಾಗಪ್ರಸನ್ನ ತೀರ್ಪು ನೀಡಿದ್ದು, ಸರ್ಕಾರದ ನಿಷೇಧ ಆದೇಶವನ್ನು ಕೆಲದಿನಗಳ ಹಿಂದೆ ಹೈಕೋರ್ಟ್ ವಿಭಾಗೀಯ ಪೀಠ ರದ್ದುಪಡಿಸಿತ್ತು. ಇದರ ಅನ್ವಯ ಡ್ರೀಮ್ 11 ಗೇಮಿಂಗ್ ಆ್ಯಪ್‍ನ ಸಂಸ್ಥಾಕರಾದ ಭವಿತ್ ಸೇಠ್ ಮತ್ತು ಹರ್ಷ ಜೈನ್ ವಿರುದ್ಧ ದಾಖಲಾಗಿದ್ದ ಕೇಸ್ ರದ್ದು ಪಡಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ಆನ್‍ಲೈನ್ ಗೇಮಿಂಗ್ ನಿಷೇಧ – ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್

ರಾಜ್ಯದಲ್ಲಿ ಈ ಹಿಂದೆ ಆನ್‍ಲೈನ್ ಗೇಮಿಂಗ್ ನಿಷೇಧಿಸಿದ ಬಳಿಕ ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಮಂಜುನಾಥ್ ಎಂಬವರು ಅಕ್ಟೋಬರ್ 7ರಂದು ಡ್ರೀಮ್ 11 ಮಾಲೀಕರ ವಿರುದ್ಧ ದೂರು ಸಲ್ಲಿಸಿದ್ದರು. ಆನ್‍ಲೈನ್ ಗ್ಯಾಂಬ್ಲಿಂಗ್ ನಿಷೇಧದ ಕುರಿತಾದ ವರದಿಗಳನ್ನು ಪತ್ರಿಕೆಯಲ್ಲಿ ಓದಿದ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪರಿಶೀಲಿಸಲಾಗಿತ್ತು. ಅನೇಕ ಕಂಪನಿಗಳು ತಮ್ಮ ಆನ್‍ಲೈನ್ ಗೇಮ್‍ಗಳಿಗೆ ಸಂಬಂಧಿಸಿದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವುದರಿಂದ ಬ್ಲಾಕ್ ಮಾಡಿದ್ದವು. ಆದರೆ ಡ್ರೀಮ್ 11 ಮಾಡಿರಲಿಲ್ಲ ಎಂದು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕೆಲದಿನಗಳ ಹಿಂದೆ ಹೈಕೋರ್ಟ್ ಸರ್ಕಾರದ ಕ್ರಮ ಸಂವಿಧಾನಬದ್ಧವಾಗಿಲ್ಲ. ಆನ್‍ಲೈನ್ ಗೇಮಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ. ಸಂವಿಧಾನಬದ್ಧವಾದ ಶಾಸನ ರೂಪಿಸಲು ಸರ್ಕಾರ ಸ್ವತಂತ್ರವಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತ್ತು. ಇದನ್ನೂ ಓದಿ: ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ

ಈ ಮೊದಲು ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ಮಾಡಿ ಆನ್‍ಲೈನ್ ಗೇಮಿಂಗ್‍ಗೆ ಸರ್ಕಾರ ನಿಷೇಧ ಹೇರಿತ್ತು. ವಿಧಾನಸಭೆಯಲ್ಲಿ ಆನ್‍ಲೈನ್ ಬೆಟ್ಟಿಂಗ್ ಪ್ರತಿಬಂಧಕ ಕಾಯ್ದೆಯ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು.

Comments

Leave a Reply

Your email address will not be published. Required fields are marked *