ಕರ್ನಾಟಕ ಚುನಾವಣೆ: ‘ದಿ ಕೇರಳ ಸ್ಟೋರಿ’ ಸಿನಿಮಾ ಪಕ್ಷವೊಂದಕ್ಕೆ ಅಸ್ತ್ರವಾಗತ್ತಾ?

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಒಂದಷ್ಟು ಲಾಭ ಪಡೆದಿದ್ದ ಬಿಜೆಪಿ (BJP) ಇದೀಗ ಮತ್ತೊಂದು ಸಿನಿಮಾವನ್ನು ವಿರೋಧಿಗಳಿಗೆ ಅಸ್ತ್ರವಾಗಿ ಬಳಸುತ್ತಿದೆ ಎನ್ನುವ ಮಾತು ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Elections) ಹೊಸ್ತಿಲಲ್ಲೇ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ರಿಲೀಸ್ ಆಗುತ್ತಿದ್ದು, ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ ಎನ್ನುವ ಚರ್ಚೆ ಶುರುವಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

ಈ ಸಿನಿಮಾದಲ್ಲಿ ಲವ್ ಜಿಹಾದ್ ಜೊತೆಗೆ ಐಸಿಸ್ ಸೇರುವ ಮುನ್ನ ಮಾಡಲಾಗುವ ಬ್ರೈನ್ ವಾಷ್ ಸೇರಿದಂತೆ ಹತ್ತಾರ ವಿಷಯಗಳನ್ನು ಕಥಾಹಂದರದಲ್ಲಿ ಜೋಡಿಸಲಾಗಿದೆಯಂತೆ. ಕೇರಳದ ಯುವತಿಯರ ನಾಪತ್ತೆ ಆದ ಬಳಿಕ ಲವ್ ಜಿಹಾದ್ ಬಲೆ, ಐಸಿಸ್ ಸೇರಿದ ಕಾಲೇಜು ಯುವತಿಯರ ರಿಯಲ್ ಸ್ಟೋರಿಯನ್ನು ತೆರೆಯ ಮೇಲೆ ತಂದಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷವು ಈ ವಿಷಯವನ್ನು ಇಟ್ಟುಕೊಂಡು ಹಲವು ಲಾಭಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಲೆಕ್ಕಾಚಾರ.

ಕೇರಳದಿಂದ ವಿದೇಶಕ್ಕೆ ಉದ್ಯೋಗ ಅರಸಿಕೊಂಡು ಹೋದ ಮಹಿಳೆಯ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ವಿವಾದಿತ (Controversy) ಅಂಶಗಳು ಇವೆ ಎಂದು ವಿರೋಧ ವ್ಯಕ್ತವಾಗಿತ್ತು. ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂತಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಈ ರೀತಿಯ ಸಂಭಾಷಣೆ ಇತ್ತು. ಇಂತಹ ಮಾತು ಮತ್ತು ಕಥೆ ವಿವಾದಕ್ಕೀಡಾಗಿತ್ತು.

ಇದರ ಜೊತೆಗೆ ಕೇರಳದಲ್ಲಿ ಮಹಿಳೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಭಯೋತ್ಪಾದನೆ ಚಟುವಟಿಕೆಗೆ ಹಚ್ಚುವ ಸಂಘಟನೆಗಳು ಇವೆ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಇದರಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಲಾಗಿದೆ. ಇಂತಹ ಚಿತ್ರಗಳು ಬಿಡುಗಡೆಯಾದರೆ, ದೇಶಕ್ಕೆ ಮತ್ತು ರಾಜ್ಯಕ್ಕೆ ಎಂತಹ ಕೆಟ್ಟ ಹೆಸರು ಬರಬಹುದು ಯೋಚಿಸಿ ಎಂದು ಹಲವು ರಾಜಕೀಯ ಮುಖಂಡರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.