ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು: ಸಿ.ಟಿ ರವಿ

ಚಿಕ್ಕಮಗಳೂರು : 20 ವರ್ಷಗಳಿಂದ ಶಾಸಕರಾಗಿದ್ದು ಮೊದಲ ಬಾರಿಗೆ ಸೋಲಿನ ಕಹಿ ಕಂಡ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲು ಎಂದು ತಿಳಿಸಿದ್ದಾರೆ.

ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಫಲಿತಾಂಶ ಅಂತಿಮವಾಗಿ ಸಿ.ಟಿ.ರವಿ ಸೋಲು ಎಂದು ರಿಸಲ್ಟ್ (Result) ಹೊರಬರುತ್ತಿದ್ದಂತೆ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ 1999ರ ಬಳಿಕ ಮೊದಲ ಬಾರಿಗೆ ಬಿಜೆಪಿ ವೈಟ್ ವಾಶ್ ಆಗಿದೆ. 1999ರಲ್ಲೂ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ಆ ಬಳಿಕ ಈಗ ಮತ್ತೆ ಐದಕ್ಕೆ ಐದು ಕ್ಷೇತ್ರಗಳು ಕೈ ಪಾಲಾಗಿವೆ. ಜಿಲ್ಲೆಯಲ್ಲಿ ಬಿಜೆಪಿ ವೈಟ್ ವಾಶ್ ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಜನತೆ ನೀಡಿದ ಜನಾದೇಶಕ್ಕೆ ತಲೆಬಾಗುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸ್ವಾಭಾವಿಕ. ಗೆಲುವಿನಿಂದ ಬೀಗಿಲ್ಲ. ಸೋಲಿನಿಂದ ಕುಗ್ಗಲ್ಲ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲು. ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದು, ಗೆದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಯಾರಾಗ್ತಾರೆ ಮುಖ್ಯಮಂತ್ರಿ..?

ಈ ಹಿಂದೆ ಸಿಕ್ಕ ಅಲ್ಪ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದು, ತಾವು ತಂದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಆಶಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಕಾರ್ಯಕರ್ತರು ಧೃತಿಗೆಡುವುದು ಬೇಡ. ಕಾರ್ಯಕರ್ತರಿಗೆ ಸದಾ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಹೈಡ್ರಾಮಾ ಬಳಿಕ ಜಯನಗರದಲ್ಲಿ ಬಿಜೆಪಿ ಗೆಲುವು- ಸೌಮ್ಯಾ ರೆಡ್ಡಿ ಕಣ್ಣೀರು