ಬೆಂಗಳೂರಲ್ಲಿ ಮೋದಿ ಭರ್ಜರಿ ರೋಡ್ ಶೋ – ಸಿಲಿಕಾನ್ ಸಿಟಿ ಜನರ ಪ್ರೀತಿಗೆ ಪ್ರಧಾನಿ ಫಿದಾ

ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಧುಮುಕಿದ್ದಾರೆ. ಬೆಂಗಳೂರಿನ ನೈಸ್ ರೋಡ್ ಜಂಕ್ಷನ್‍ನಿಂದ ಸುಮನಹಳ್ಳಿಯವರೆಗೆ ಅದ್ಧೂರಿಯಾಗಿ ರೋಡ್ ಶೋ ನಡೆಯಿತು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 5 ಕಿ.ಮೀನಲ್ಲಿ ರೋಡ್ ಶೋ ನಡೆಸಿದರು.

ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಯಲಹಂಕ, ದಾಸರಹಳ್ಳಿ, ಆರ್.ಆರ್ ನಗರ, ಯಶವಂತಪುರ, ಬ್ಯಾಟರಾಯನಪುರ, ಪುಲಿಕೇಶಿನಗರ, ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಬಿಜೆಪಿ ಚಿಹ್ನೆ ಇರುವ ಪೇಟ ಧರಿಸಿ ಮೋದಿ ರೋಡ್ ಶೋ ನಡೆಸಿದರು. ಮೋದಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಸಾಥ್ ನೀಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ರೋಡ್‌ ಶೋ  ನಡೆಯಿತು.

ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟಿದ್ದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಪೇಟ ಧರಿಸಿ ಮಿಂಚಿದರು. ಜೊತೆಗೆ ಜನರತ್ತ ಕೈಬೀಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಹೂಮಳೆ ಸುರಿಸಿ ಸಂಭ್ರಮಿಸಿದರು. ಮೋದಿ ಮೋದಿ ಜೈಕಾರ ಘೋಷಣೆ ಜೋರಾಗಿತ್ತು.

ಮೋದಿ ರೋಡ್ ಶೋ ಭದ್ರತೆಗೆ ಬೆಂಗಳೂರು 7 ಸುತ್ತಿನ ಕೋಟೆಯಂತಾಗಿತ್ತು. ರಸ್ತೆಗೆ ಬ್ಯಾರಿಕೇಡ್‍ಗಳನ್ನು ಹಾಕಿ, ಅಂಗಡಿ-ಮುಂಗಟ್ಟುಗಳನ್ನು ಕ್ಲೋಸ್ ಮಾಡಿ ಭದ್ರತೆ ಒದಗಿಸಲಾಗಿತ್ತು. ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚುವರಿಯಾಗಿ ಹತ್ತು ಕೆಎಸ್‍ಆರ್‌ಪಿ ತುಕಡಿ, 50 ಮೀಟರ್ ಒಬ್ಬರಂತೆ ಪ್ರತಿ ಬಿಲ್ಡಿಂಗ್ ಮೇಲೆ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

ಬೀದರ್, ವಿಜಯಪುರ, ಬೆಳಗಾವಿ ಇಂದು ಮೋದಿ ಪ್ರಚಾರವನ್ನು ನಡೆಸಿ ಬೆಂಗಳೂರಿಗೆ ಆಗಮಿಸಿದ್ದರು. ಮೋದಿಯನ್ನು ನೋಡಲು ಸಾವಿರಾರು ಕಾರ್ಯಕರ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿ “ಮೋದಿ ಮೋದಿ” ಎಂದು ಜಯಘೋಷ ಹಾಕುತ್ತಿದ್ದರು.

ಇದನ್ನೂ ಓದಿ: ಮೋದಿ ರೋಡ್ ಶೋ- ಮದುಮಗ ಆಯ್ತು, ಈಗ ಮದುವೆಗೆ ಹೋಗಲು ಕಷ್ಟಪಟ್ಟ ವಧು