ಗುರುವಾರದೊಳಗೆ ಜೆಡಿಎಸ್ 2ನೇ ಪಟ್ಟಿ: ಹೆಚ್‌ಡಿ ಕುಮಾರಸ್ವಾಮಿ

– ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಇರಲಿದೆ

ಬೆಂಗಳೂರು: ಜೆಡಿಎಸ್ (JDS) ಅಭ್ಯರ್ಥಿಗಳ 2ನೇ ಪಟ್ಟಿ ಬುಧವಾರ ಅಥವಾ ಗುರುವಾರ ಬಿಡುಗಡೆ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ತಿಳಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂದು ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆ ಆಗಿಲ್ಲ. ದೇವೇಗೌಡರು ಬುಧವಾರ ಸಂಜೆ ದೆಹಲಿಯಿಂದ ವಾಪಸ್ ಆಗುತ್ತಾರೆ. ನಂತರ ಪಟ್ಟಿ ಹೊರಬರಲಿದೆ ಎಂದರು.

ನನಗಿಂತ ನಿಮಗೆ ಹಾಸನ (Hassana) ಟಿಕೆಟ್ ಘೋಷಣೆ ಬಗ್ಗೆ ಕುತೂಹಲವಿದೆ ಎಂದು ಮಾಧ್ಯಮಗಳಿಗೆ ಹೇಳಿದ ಅವರು, ಹಾಸನವನ್ನು ಸೇರಿಸಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದನ್ನು ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಆ ಪಟ್ಟಿಯಲ್ಲಿ ಹಾಸನದ್ದೂ ಒಳಗೊಂಡಂತೆ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಮೊದಲ ಪಟ್ಟಿ ಬಿಡುಗಡೆಯಾದಾಗಲೂ ಯಾವುದೇ ಸಮಸ್ಯೆ ಇರಲಿಲ್ಲ. 2ನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ. ಇದರಿದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ.2-3 ರಷ್ಟು ಮತ ಪ್ರಮಾಣ ಹೆಚ್ಚಾಗಲಿದೆ. ನಮ್ಮ ಗುರಿ ಮುಟ್ಟೋದಕ್ಕೆ ನಾವು ಯಾವುದೇ ದುಡುಕಿನ ತೀರ್ಮಾನ ಮಾಡಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡುತ್ತೇವೆ ಎಂದು ಅವರು ಉತ್ತರ ನೀಡಿದರು.

ಕಾಂಗ್ರೆಸ್ ಪಟ್ಟಿ ರಿಲೀಸ್ ಆಗದ ಹಿನ್ನೆಲೆ ಜೆಡಿಎಸ್ ಪಟ್ಟಿ ವಿಳಂಬ ಆಗುತ್ತಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಚಿಂತೆ ಮಾಡಿಲ್ಲ. ನಾವು ನಮ್ಮದೇ ರೀತಿಯಲ್ಲಿ ಅಭ್ಯರ್ಥಿಗಳನ್ನು ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮೀಸಲಾತಿ ತೆಗೆದವರಿಗೆ ಶಾಪ ತಟ್ಟಲಿದೆ: ಹೆಚ್‌ಡಿ ರೇವಣ್ಣ

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂದರ್ಶನ ಒಂದರಲ್ಲಿ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಹೆಚ್‌ಡಿಕೆ, ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಅವರ ಆಂತರಿಕ ವಿಚಾರಗಳ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ? ಚುನಾವಣೆಯಲ್ಲಿ ಜನ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಕೊಡ್ತಾರೋ ಅದು ಮುಖ್ಯ. ಎಷ್ಟು ಸ್ಥಾನ ಬಂತು ಎನ್ನುವುದರ ಮೇಲೆ ಎಲ್ಲಾ ನಿರ್ಧಾರ ಆಗುತ್ತದೆ. ಮಗು ಹುಟ್ಟೋಕು ಮುನ್ನ ಕುಲಾವಿ ಹೊಲಿಸಿದರೆ ಆಗುತ್ತಾ? ಮುಗು ಹುಟ್ಟಿದರೆ ಕುಲಾವಿ ಹೊಲಿಸಬಹುದು. ಅದಕ್ಕೂ ಮುನ್ನ ಕುಲಾವಿ ಹಾಕ್ಕೋತ್ತೀನಿ ಅಂದ್ರೆ ಯಾಕೆ ಬೇಡ ಎನ್ನಲಿ ಎಂದರು.

ಜೆಡಿಎಸ್ ಕುರಿತು ಅನಗತ್ಯ ಹೇಳಿಕೆ ನೀಡಿರುವ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ ವಿಚಾರದ ಬಗ್ಗೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ, ಹೆಚ್ಚು ಕಡಿಮೆ ಆಗಿ ಅವರು ರಾಜಿನಾಮೆ ಕೊಡಬೇಕಾದ ಸಂದರ್ಭ ಬಂದುಬಿಟ್ಟಾಯಿತು. ಆಮೇಲೆ ಶಾಸಕನಾಗೋಕೆ ಆಗಲ್ವಲ್ಲಾ? ಅವರು ಮಾಡಿದ ಅನಾಚಾರ ಜನರಿಗೆ ಗೊತ್ತಿದೆ. ರೆಫ್ರಿಜರೇಟರ್, ಸ್ಟವ್ ಎಲ್ಲಾ ಹಂಚುತ್ತಿದ್ದಾರೆ. ಇಷ್ಟೆಲ್ಲಾ ಕೊಡ್ತಾ ಇದ್ದಾರೆ ಅಂದರೆ, ಇವರು ಇನ್ನೆಷ್ಟು ಶ್ರೀಮಂತರು ಅಂತ ಜನರು ಮನೇಲಿ ಕೂರಿಸಿಬಿಟ್ಟರೆ ಕಷ್ಟ. ಎಚ್ಚರಿಕೆಯಿಂದ ಇದ್ದರೆ ಉತ್ತಮ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು