ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?

ನವದೆಹಲಿ: ಸಿದ್ದರಾಮಯ್ಯ (Siddaramaiah) ಕುರು`ಕ್ಷೇತ್ರ’ಕ್ಕೆ ಹೈಕಮಾಂಡ್ (High Command) ಟ್ವಿಸ್ಟ್ ನೀಡಿದೆ. ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಹೈಕಮಾಂಡ್ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆಯಾಗಿದೆ.

ಸಿದ್ದರಾಮಯ್ಯ ಕೋಲಾರದಿಂದ (Kolara) ಸ್ಪರ್ಧಿಸಲು ಸಿದ್ದರಿದ್ದರೂ ಹೈಕಮಾಂಡ್ ನಾಯಕರು ಮಾತ್ರ ರೆಡ್‌ ಸಿಗ್ನಲ್‌ ತೋರಿಸಿದ್ದಾರೆ. ನೀವು ವರುಣಾದಿಂದಲೇ (Varuna) ಸ್ಪರ್ಧಿಸಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಟಿ ನರಸೀಪುರದಿಂದ ಸುನೀಲ್ ಬೋಸ್ ಬೇಡ. ಹೆಚ್‍ಸಿ ಮಹದೇವಪ್ಪ ಕಣಕ್ಕಿಳಿಯಲಿ ಎಂದು ಹೈಕಮಾಂಡ್ ಹೇಳಿದೆ. ಈ ಬೆಳವಣಿಗೆಯಿಂದ ಸಿದ್ದರಾಮಯ್ಯ ಅನ್ಯಮಸ್ಕರಾಗಿಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದರೆ ನಿಮಗೆ ಈ ರೀತಿ ಹೇಳಿದ್ದು ಯಾರು? ನನ್ನ ಬಗ್ಗೆ ಚರ್ಚೆಯೇ ನಡೆದಿಲ್ಲ. ವರುಣಾದಲ್ಲಿ ಪುತ್ರ ಯತೀಂದ್ರ ನಿಲ್ಲುತ್ತಾನೆ. ಹೈಕಮಾಂಡ್ ಹೇಳಿದ ಕಡೆ ನಾನು ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಈ ಬೆನ್ನಲ್ಲೇ ಕೋಲಾರ ಪ್ರವಾಸ ರದ್ದು ಮಾಡಿದ ಸಿದ್ದರಾಮಯ್ಯ ತುರ್ತಾಗಿ ಕೋಲಾರ ನಾಯಕರನ್ನು ಮನೆಗೆ ಕರೆಸಿ ಗೌಪ್ಯ ಸಭೆ ಮಾಡಿದ್ದಾರೆ. ಆದರೆ ಈ ಸಭೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಶ್ರೀನಿವಾಸಗೌಡ ಸೇರಿ ಕೋಲಾರದ ಪ್ರಮುಖರೇ ಗೈರಾಗಿದ್ದರು. ಈ ಮೂಲಕ ಹೈಕಮಾಂಡ್ ತೀರ್ಮಾನವನ್ನು ವಿರೋಧಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಮಧ್ಯೆ, ಮಾರ್ಚ್ 24ರಿಂದ 31ರವರೆಗೆ ಏಳು ಜಿಲ್ಲೆಗಳಲ್ಲಿ ನಿಗದಿಯಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಸಿದ್ದರಾಮಯ್ಯ ದಿಢೀರ್ ಆಗಿ ರದ್ದು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಾನಾ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

ಹೈಕಮಾಂಡ್ ಹೇಳಿದ್ದೇನು?
ಕೋಲಾರದಲ್ಲಿ ನಡೆಸಿದ ಸರ್ವೇ ವರದಿ ನಿಮಗೆ ಪೂರಕವಾಗಿಲ್ಲ. ಸುಲಭವಾಗಿ ಗೆಲುವು ದಕ್ಕುವ ಸ್ಥಿತಿ ಇಲ್ಲ. ಕೋಲಾರ ನಾಯಕರ ಒಳ ಜಗಳ ನಿಮಗೆ ಸಮಸ್ಯೆಯಾಗುವ ಸಾಧ್ಯತೆ ಇದ್ದು ಕಠಿಣ ಶ್ರಮದ ಅಗತ್ಯವಿದೆ. ನಿಮ್ಮ ಪರ ಇಲ್ಲಿ ಕೆಲಸ ಮಾಡಲು ಗಟ್ಟಿ ನಾಯಕರ ಅಗತ್ಯವಿದೆ. ಆದರೆ ಕೋಲಾರದಲ್ಲಿ ಗಟ್ಟಿ ನಾಯಕರು ಇಲ್ಲ.

ಕೋಲಾರ ನಗರದಲ್ಲಿ ನಿಮ್ಮ ಪರ ಅಲೆ ಇದ್ದರೆ ಗ್ರಾಮೀಣ ಭಾಗದಲ್ಲಿ ಆ ಅಲೆ ಇಲ್ಲ. ಹಳ್ಳಿ ಭಾಗದಲ್ಲಿ ಜೆಡಿಎಸ್‌, ಬಿಜೆಪಿ ಪರ ಅಲೆಯಿದೆ. ಒಂದು ವೇಳೆ ನೀವು ಕೋಲಾರದಿಂದ ಸ್ಪರ್ಧಿಸಿದರೆ ಬಿಜೆಪಿ, ಜೆಡಿಎಸ್ ಒಂದಾಗಿ ನಿಮ್ಮನ್ನು ಕಟ್ಟಿ ಹಾಕಲು ಪ್ರಯತ್ನಿಸಬಹುದು. ಆಗ ನೀವು 15, 20 ದಿನ ಅಲ್ಲೇ ಪ್ರಚಾರ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ನಿಮ್ಮ ಸೇವೆ ಅಗತ್ಯವಾಗಿದೆ. ಈ ಕಾರಣಕ್ಕೆ ನೀವು ಕೋಲಾರ ಬದಲು ವರುಣಾದಿಂದಲೇ ಕಣಕ್ಕಿಳಿಯಬೇಕು. ಕೊನೆಯ ಚುನಾವಣೆಯ ಸಮಯದಲ್ಲಿ ಜಾಸ್ತಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ. ನಿಮ್ಮ ಪುತ್ರ ಯತೀಂದ್ರಗೆ ಮುಂದೆ ಸೂಕ್ತ ಅವಕಾಶ ನೀಡುತ್ತೇವೆ.

Comments

Leave a Reply

Your email address will not be published. Required fields are marked *