ಪದ್ಮನಾಭನಗರದಿಂದ ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಕಣಕ್ಕೆ?

ಬೆಂಗಳೂರು: ಕಂದಾಯ ಸಚಿವ ಅಶೋಕ್‌ಗೆ (R Ashok) ಠಕ್ಕರ್‌ ನೀಡಲು ಪದ್ಮನಾಭನಗರದಿಂದ ಡಿಕೆ ಶಿವಕುಮಾರ್‌ (DK Shivakumar) ಸಹೋದರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್‌ (DK Suresh) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಕನಕಪುರದಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಕಟ್ಟಿ ಹಾಕಲು ಬಿಜೆಪಿ ಹೈಕಮಾಂಡ್‌ ಅಶೋಕ್‌ ಅವರಿಗೆ ಟಿಕೆಟ್‌ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಅಶೋಕ್‌ ವಿರುದ್ಧ ಡಿಕೆ ಸುರೇಶ್‌ ಅವರನ್ನು ಕಣಕ್ಕೆ ಇಳಿಸಿದರೆ ಉತ್ತಮ ಎಂಬ ಸಲಹೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಲಕ್ಷ್ಮಣ ಸವದಿ ಗುಡ್‍ಬೈ – ಶೀಘ್ರವೇ ಕಾಂಗ್ರೆಸ್ ಸೇರ್ಪಡೆ?

ಈಗಾಗಲೇ ಪದ್ಮನಾಭನಗರದಿಂದ (Padmanabhanagar) ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಒಂದು ಬಾರಿ ಟಿಕೆಟ್‌ ನೀಡಿದ ಬಳಿಕ ಬದಲಾವಣೆ ಮಾಡಿದರೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ ತನ್ನ ನಿರ್ಧಾರವನ್ನು ಬದಲಾವಣೆ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್‌, ಸದ್ಯಕ್ಕೆ ಏನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ರಾಮನಗರದಿಂದ ಡಿಕೆ ಸುರೇಶ್‌ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್‌ನಿಂದ ಬಂದಿತ್ತು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಸುರೇಶ್‌, ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ, ಆಸಕ್ತಿಯೂ ಇಲ್ಲ. ಸಂಸದನಾಗಿಯೇ ಮುಂದುವರೆಯುತ್ತೇನೆ ಎಂದು ತಿಳಿಸಿದ್ದರು.

ಈಗ ಸಹೋದರನ ವಿರುದ್ಧವೇ ಅಶೋಕ್‌ ಕಣಕ್ಕೆ ಇಳಿಯುತ್ತಿರುವ ಕಾರಣ ಕಾಂಗ್ರೆಸ್‌ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.