ತಪಾಸಣೆಗೆ ಹೆದರಿ ರಸ್ತೆ ಪಕ್ಕದಲ್ಲಿಯೇ ಕಂತೆ ಕಂತೆ ಹಣ ಸುರಿದು ಪರಾರಿಯಾದ್ರು!

ತುಮಕೂರು: ರಸ್ತೆ ಪಕ್ಕದಲ್ಲಿಯೇ ಕಂತೆ ಕಂತೆ ಹಣವನ್ನು ಸುರಿದು ಹೋಗಿರುವ ಘಟನೆ ಜಿಲ್ಲೆಯ ಕುಣಿಗಲ್‍ನ ಆಲಪ್ಪನ ಗುಡ್ಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹಾಸನದಿಂದ ನೆಲಮಂಗಲದ ಕಡೆಗೆ ಹೊಗುತ್ತಿದ್ದ ವಾಹನದಿಂದ ಈ ಹಣವನ್ನು ಎಸೆಯಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ನೆಲಮಂಗಲದಲ್ಲಿ ಪೊಲೀಸರು ವಾಹನ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದ ವಾಹನದಲ್ಲಿದ್ದ ಜನ ಸಂಪರ್ಕವಿಲ್ಲದ ವೇಳೆ ರಸ್ತೆ ಪಕ್ಕದಲ್ಲಿಯೇ ಹಣ ಸುರಿದು ಹೋಗಿದ್ದಾರೆ ಎನ್ನಲಾಗಿದೆ.

ಈ ದಾರಿ ಮೂಲಕ ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಈ ಹಣವನ್ನು ನೋಡಿದ್ದಾರೆ. ಅಲ್ಲದೇ, ಪೊಲೀಸರಿಗೆ ಗೊತ್ತಾಗದಂತೆ ಆ ಹಣವನನ್ನು ಚೀಲದಲ್ಲಿ ತುಂಬಿಕೊಂಡಿದ್ದಾರೆ.

ಈ ವೇಳೆ ಆಟೋದಲ್ಲಿ ಬಂದ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. “ಏ ಪೊಲೀಸ್ ಜೀಪ್ ಬಂದ್ರೆ ಜೀವ ಹೋಗುತ್ತೆ. ಬೇಗ, ಬೇಗ ಹಣ ತುಂಬಿಕೋ, ಅವರ ಬಂದ್ರೆ ಏನ್ ಕಥೆ ಹೇಳಬೇಕು. ಅವರು ಬಂದ್ರೆ ಹಣ ಸಿಗಲ್ಲ. ಏನ್ ಆಗಲ್ಲ” ಎಂದು ಅವರಿಬ್ಬರು ಮಾತನಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಎಸೆಯಲಾಗಿರುವ ಹಣ ಯಾರಿಗೆ ಸೇರಿದ್ದು? ರಸ್ತೆಯಲ್ಲಿ ಎಸೆದವರು ಯಾರು ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಚುನಾವಣೆಗಾಗಿ ಈ ಹಣವನ್ನು ಸಾಗಿಸಲಾಗುತ್ತಿತ್ತು ಎನ್ನುವ ಶಂಕೆ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಈಗ ಹಣ ಸಾಗಾಟ ನಡೆಸಿರುವ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *