ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸಲು ಚಿಂತನೆ- ಸುಧಾಕರ್

– ರಾಜ್ಯದಲ್ಲಿ ಎಲ್ಲೆಲ್ಲಿ ರೆಡ್ ಝೋನ್?
– ಬೆಂಗ್ಳೂರು ಕೊರೊನಾ ಸೋಂಕಿತರಿಗೆ ಹೈಫೈ ಫುಡ್!

ಬೆಂಗಳೂರು: ರಾಜ್ಯದ ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ನಾವು ಯೋಜನೆ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಸುಧಾಕರ್ ಹೇಳಿದ್ದಾರೆ.

ಲಾಕ್‍ಡೌನ್ ವಿಸ್ತರಣೆ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರಿನ ಕೆಲ ಪ್ರದೇಶ, ಮೈಸೂರು, ನಂಜನಗೂಡು, ಗೌರಿಬಿದನೂರು, ಬೀದರ್, ಮಂಗಳೂರನ್ನು ರೆಡ್ ಝೋನ್ ಎಂದು ಗುರುತಿಸಿದ್ದೇವೆ. ಏಪ್ರಿಲ್ 14ರ ಬಳಿಕ ಬಳಿಕ ಸಿಎಂ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಸಭೆ ನಡೆಸಿ ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ. ಹಂತ ಹಂತವಾಗಿ ಇಲ್ಲಿ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ನಂಜನಗೂಡು ನಮ್ಮ ನಿರೀಕ್ಷೆ ಮೀರಿ ಹೋಗಿದೆ. ಅದನ್ನು ರೆಡ್ ಝೋನ್ ಅಂತ ಘೋಷಣೆ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿ ಇಂಪ್ಯಾಕ್ಟ್:
ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ ಗಳಿಗೆ ನ್ಯೂಟ್ರಿಷನ್ ಆಹಾರ ಕೊರತೆ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ವೈದ್ಯರ ಹಾಗೂ ನರ್ಸ್ ಗಳ ಜೊತೆಗೆ ಸಭೆ ನಡೆಸಿದ್ದು, ಯಾವುದೇ ಕೊರತೆ ಬಾರದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇನ್ಮುಂದೆ ಕೋವಿಡ್ ವಾರ್ಡ್ ನಲ್ಲಿ ಸೇವೆ ಸಲ್ಲಿಸುವ ಬೆಂಗಳೂರಿನ ನರ್ಸ್, ವೈದ್ಯರು ಹಾಗೂ ರೋಗಿಗಳಿಗೆ ತಾಜ್ ಹೋಟೆಲ್‍ನಿಂದ ಆಹಾರ ಸರಬರಾಜು ಮಾಡಲಾಗುತ್ತದೆ. ಊಟ ಸರಬರಾಜು ಮಾಡಲು ತಾಜ್ ಹೋಟೆಲ್ ಮುಂದೆ ಬಂದಿದೆ. ಜೊತೆಗೆ ರಾಜ್ಯಾದ್ಯಂತ ಎಲ್ಲಾ ರೋಗಿಗಳಿಗೆ ನ್ಯೂಟ್ರಿಷನ್ ಊಟದ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *