ಕಿಲ್ಲರ್ ಕೊರೊನಾಗೆ ಚಿಕ್ಕಬಳ್ಳಾಪುರದ 65 ವರ್ಷದ ವೃದ್ಧ ಬಲಿ – ರಾಜ್ಯದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಚಿಕ್ಕಬಳ್ಳಾಪುರ: ಮಹಾಮಾರಿ ಕೊರೊನಾ ವೈರಸ್‍ಗೆ ಚಿಕ್ಕಬಳ್ಳಾಪುರ ನಗರದ ನಿವಾಸಿ 65 ವರ್ಷದ ವೃದ್ಧ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇದು ಸೋಂಕಿನಿಂದ ಸಾವನ್ನಪ್ಪಿದ ಎರಡನೇ ಪ್ರಕರಣವಾಗಿದೆ. ಈ ಮೊದಲು ಗೌರಿಬಿದನೂರಿನ 70 ವರ್ಷದ ವೃದ್ಧೆ ಕೊರೊನಾ ವೈರಸ್‍ನಿಂದ ಮೃತಪಟ್ಟಿದ್ದರು. ಇಂದು ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ವೃದ್ಧ ಮೊದಲೇ ಅಸ್ತಮಾ, ಬಿಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರನ್ನು ಏಪ್ರಿಲ್ 08ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರವಷ್ಟೇ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಸೋಂಕಿತ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ವೃದ್ಧ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆ ಹೊಂದಿಲ್ಲ. ಕೊರೊನಾ ಸೋಂಕಿತ ಪ್ರದೇಶಗಳಿಗೆ ಹೋಗಿ ಬಂದ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಆದರೂ ಇವರಿಗೆ ಕೊರೊನಾ ಹೇಗೆ ಬಂತು ಅನ್ನೋದು ಯಕ್ಷ ಪ್ರಶ್ನೆಯಾಗಿದ್ದು, ಕೊರೊನಾ ಹೇಗೆ ಬಂತು ಅಂತ ಪತ್ತೆ ಹಚ್ಚುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ.

ಸದ್ಯ ಮೃತನ ಮನೆಯ ಎಲ್ಲಾ ಸದಸ್ಯರನ್ನು ಚಿಕ್ಕಬಳ್ಳಾಪುರ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಸೋಂಕಿತ ವೃದ್ಧ ವಾಸವಿದ್ದ ಏರಿಯಾ ಅಕ್ಕ ಪಕ್ಕದ 4 ವಾರ್ಡುಗಳನ್ನ ಸೀಲ್‍ಡೌನ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *