ಪ್ರತಿಕ್ರಿಯೆ ನೀಡದೇ ಫುಲ್‌ ಗರಂ ಆಗಿ ತೆರಳಿದ ಸಿದ್ದರಾಮಯ್ಯ

ಬೆಂಗಳೂರು: ಇಂದು 61ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಗಿಫ್ಟ್‌ ನೀಡುತ್ತಾ ಎಂಬ ಕುತೂಹಲ ಮೂಡಿಸಿದೆ.

ಈ ಕುತೂಹಲ ಮೂಡಲು ಕಾರಣವಾಗಿದ್ದು ಕಾಂಗ್ರೆಸ್‌ (Congress) ಶಾಸಕಾಂಗ ಪಕ್ಷದ ಸಭೆ. ಖಾಸಗಿ ಹೋಟೆಲಿನಲ್ಲಿ ಸಭೆ ನಡೆದ ಬಳಿಕ ಹೈಕಮಾಂಡ್‌ ನೇಮಿಸಿದ ವೀಕ್ಷಕರು ರಾತ್ರಿ 1:30ರವರೆಗೂ ಶಾಸಕರಿಂದ ಅಭಿಪ್ರಾಯ ಪಡೆದರು.

 

ಖಾಸಗಿ ಹೋಟೆಲಿನಿಂದ ಸಭೆ ಮುಗಿದ ಬಳಿಕ ಸಿದ್ದರಾಮಯ್ಯ (Siddaramaiah) ಯಾವುದೇ ಪ್ರತಿಕ್ರಿಯೆ ನೀಡದೇ ಫುಲ್‌ ಗರಂ ಆಗಿಯೇ ತೆರಳಿದರೆ ಡಿಕೆಶಿ (DK Shivakumar) ನಗುಮೊಗದಿಂದಲೇ ತೆರಳಿದರು. ಸಭೆಯ ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಡಿಕೆಶಿ ಬೆಳಗ್ಗಿನ ಜಾವ 4:25ಕ್ಕೆ ಸದಾಶಿವನಗರದ ನಿವಾಸಕ್ಕೆ ಆಗಮಿಸಿದರು.  ಇದನ್ನೂ ಓದಿ: ಮುಂದಿನ ಸಿಎಂ ಯಾರು? – ರಾತ್ರಿ 1:30ರವರೆಗೆ ನಡೆದಿದ್ದು ಏನು?

ಈ ವೇಳೆ ಮಾತನಾಡಿದ ಅವರು, ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ಪಾಸ್‌ ಮಾಡಿದ್ದೇವೆ. ಚುನಾವಣಾ ಸಮಯದಲ್ಲಿ ವೋಟ್ ಹಾಕಿದವರಿಗೆ, ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದೇವೆ. ವರಿಷ್ಠರಿಗೆ ಎಲ್ಲವನ್ನು ಕಳುಹಿಸಿದ್ದೇವೆ. ಅವರು ಎಲ್ಲ ನಿರ್ಣಯ ಮಾಡುತ್ತಾರೆ ಎಂದು ತಿಳಿಸಿದರು.

 

ಈ ವೇಳೆ ಸರ್ಕಾರ ಯಾವಾಗ ರಚನೆ ಆಗಲಿದೆ ಎಂದು ಕೇಳಿದ್ದಕ್ಕೆ ಶುಭವಾರ, ಶುಭ ಘಳಿಗೆ, ಶುಭ ಮುಹೂರ್ತದಲ್ಲಿ ಅದನ್ನೆಲ್ಲಾ ನೋಡೋಣ ಎಂದು ಉತ್ತರಿಸಿದರು.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಡಿಕೆ ಶಿವಕುಮಾರ್‌ ಅಭಿಮಾನಿಗಳು ಸದಾಶಿವನಗರದ ನಿವಾಸಕ್ಕೆ ಆಗಮಿಸಿದ್ದಾರೆ. ಅಭಿಮಾನಿಗೆ ಡಿಕೆಶಿಗೆ ಜೈಕಾರ ಹಾಕಿ ಸಿಎಂ ಪಟ್ಟ ಕೊಡಬೇಕು ಎಂದು ಆಗ್ರಹಿಸಿದ್ದಾರೆ.