362 ಮಂದಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗೆ ಕ್ಯಾಬಿನೆಟ್ ಒಪ್ಪಿಗೆ

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿಗಳಿಗೆ ಸಿಹಿ ಸುದ್ದಿ. 362 ಮಂದಿ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಆದೇಶವನ್ನು ಪ್ರಶ್ನಿಸದಿರಲು ಸರ್ಕಾರ ನಿರ್ಧಾರಿಸುವ ಮೂಲಕ ನಾಲ್ಕು ವರ್ಷಗಳ ಕಾನೂನು ಸಮರ ಅಂತ್ಯವಾಗಿದೆ.

ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕಾನೂನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಟಿಬಿ ಜಯಚಂದ್ರ ಸದ್ದಿಗೋಷ್ಠಿ ನಡೆಸಿ, ಕೆಎಟಿ ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಮಾತುಕತೆ ನಡೆಸಿದ್ದೇವೆ. ಆಡಳಿತದ ದೃಷ್ಟಿಯಿಂದ ರಾಜ್ಯ ಸರ್ಕಾರ ಆದೇಶವನ್ನು ಪ್ರಶ್ನಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ಎಲ್ಲಾ 362 ಗೆಜೆಟೆಡ್ ಪ್ರೊಬೇಷನರಿ ಅಭ್ಯರ್ಥಿಗಳ ನೇಮಕಾತಿಗೆ ಒಪ್ಪಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಈ ವಿಚಾರದಲ್ಲಿ ಎಲ್ಲಾ ದೃಷ್ಟಿಕೋನಗಳಿಂದ ನೋಡಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ಎಚ್‍ಡಿ ಕುಮಾರಸ್ವಾಮಿ ಗೆಲುವು ಅಲ್ಲ, ಇದು ಯಾರ ಗೆಲುವು ಅಲ್ಲ ಎಂದು ಹೇಳಿದರು.

ಸಿಐಡಿ ತನಿಖೆಯಲ್ಲಿ ಯಾವ ಆರೋಪಗಳು ಸಾಬೀತಾಗಿರಲಿಲ್ಲ. ಕೇವಲ  ಫೋನ್ ಕಾಲ್ ಮಾಡಿರುವುದು ಸಾಕ್ಷಿ ಆಗುವುದಿಲ್ಲ. ಹೀಗಾಗಿ ಕೆಎಟಿ ಆದೇಶವನ್ನು ಪಾಲಿಸುತ್ತಿದ್ದೇವೆ ಅಷ್ಟೇ ಅಲ್ಲದೇ ಮತ್ತೆ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲು ಎಲ್ಲರಿಗೂ ಸ್ವಾಂತಂತ್ರ್ಯ ಇದೆ ಎಂದು ಹೇಳಿದರು.

ಏನಿದು ಪ್ರಕರಣ?
2011ರಲ್ಲಿ ಕೆಪಿಎಸ್‍ಸಿ ನೇಮಕಾತಿಯಲ್ಲಿ ಅಕ್ರಮ ನಡೆದ ಕಾರಣ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಆದೇಶದ ವಿರುದ್ಧ ಕೆಲ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು.

 

Comments

Leave a Reply

Your email address will not be published. Required fields are marked *