ಗೋಕಾಕ್‌ನಲ್ಲಿ ಯಾರಿಗೆ ಸಿಗುತ್ತೆ ‘ಕೈ’ ಟಿಕೆಟ್-ಶುರುವಾಯ್ತು ಭಾರೀ ಪೈಪೋಟಿ

ಬೆಳಗಾವಿ: ಡಿಸೆಂಬರ್ ೫ರಂದು ಗೋಕಾಕ್ ಕ್ಷೇತ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದಾರೆ. ಆದರೆ ಗೋಕಾಕ್, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಸದ್ಯ ಮೂರು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿದೆ.

ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ದಿನದಿಂದಲೇ ಲಖನ್ ಜಾರಕಿಹೊಳಿ ಮುಂದಿನ ಅಭ್ಯರ್ಥಿ ಎನ್ನುವ ನಿಟ್ಟಿನಲ್ಲಿ ಬಿಂಬಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಒಂದು ಹಂತದಲ್ಲಿ ಸಿದ್ದರಾಮಯ್ಯ ಕೂಡ ಸಹಮತ ಸೂಚಿಸಿದ್ದರು. ಈಗ ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡಬೇಕಾ ಅಥವಾ ಬೇಡ್ವಾ ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಕಳೆದ 2 ತಿಂಗಳಿನಿಂದ ಲಖನ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಪ್ರಚಾರ ಕೂಡ ನಡೆಸಿ ಮತದಾರರನ್ನ ಸೆಳೆಯುವ ಕೆಲಸ ಮಾಡಿದ್ದಾರೆ. ಒಂದು ವಾರದ ಹಿಂದೆ ಸಿದ್ದರಾಮಯ್ಯ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ರಾಮದುರ್ಗದ ಅಶೋಕ ಪಟ್ಟಣ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಮಾಜಿ ಶಾಸಕ ಫಿರೋಜ್ ಸೇಠ್ ಇಬ್ಬರು ನಾಯಕರು ಲಖನ್ ಜಾರಕಿಹೊಳಿ ಟಿಕೆಟ್ ನೀಡದಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಟಿಕೆಟ್ ನೀಡಿದರೆ ಮುಂದಿನ ದಿನಗಳಲ್ಲಿ ಜಾರಕಿಹೊಳಿ ಸಹೋದರರು ಒಂದಾಗಿ ರಮೇಶ್ ಜಾರಕಿಹೊಳಿಯನ್ನ ಗೆಲ್ಲಿಸುತ್ತಾರೆ. ಈ ರೀತಿ ಹಲವು ಬಾರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರಂತೆ. ಇಬ್ಬರು ಶಾಸಕರು ಟಿಕೆಟ್ ತಪ್ಪಿಸುವ ಕುರಿತು ಖುದ್ದು ಸತೀಶ್ ಜಾರಕಿಹೊಳಿ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೇ ಹೆಸರು ಹೇಳದೇ ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಇಬ್ಬರು ಮಾಜಿ ಶಾಸಕರನ್ನ ಕೇಳಿದ್ರೆ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಸದ್ಯ ಇದರಿಂದ ಸತೀಶ್ ಮತ್ತು ಲಖನ್‌ಗೆ ಒಂದು ಹಂತದಲ್ಲಿ ಶಾಕ್ ಆಗಿದೆ. ಇತ್ತ ಗೋಕಾಕ್‌ನ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕೈಕೊಟ್ಟಿದ್ದು, ಇದರಿಂದ ಗೋಕಾಕ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

ಗೋಕಾಕ್‌ನಲ್ಲಿ ನಡೆಯಲಿರುವ ಬೈ ಎಲೆಕ್ಷನ್‌ನಲ್ಲಿ ಲಖನ್ ಜಾರಕಿಹೊಳಿಗೆ ಟಿಕೆಟ್ ನೀಡಬಾರದು ಅಂತಾ ಮಾಜಿ ಶಾಸಕರು ಲಾಬಿ ನಡೆಸಿದ್ದಾರೆ. ಮತ್ತೊಂದು ಕಡೆ ಲಖನ್ ಕಣಕ್ಕಿಳಿದರೇ ಸೋಲಿಸಲೇಬೇಕೆಂದುಕೊಂಡು ರಮೇಶ್ ಜಾರಕಿಹೊಳಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಗೋಕಾಕ್‌ನ ಚುನಾಯಿತ ಸ್ಥಳೀಯ ಸದಸ್ಯರನ್ನ ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಎರಡೆರಡು ಶಾಕ್‌ಗೆ ಒಳಗಾಗಿರುವ ಸಹೋದರರು ಕೈ ಟಿಕೆಟ್ ಹೇಗೆ ಗಿಟ್ಟಿಸಿಕೊಳ್ಳುತ್ತಾರೆ ಎಂಬುವುದನ್ನ ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *