ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ: ಡಿಕೆಶಿ

ಬೆಳಗಾವಿ: ಕರ್ನಾಟಕ ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. ಪ್ರತಿ ಹಂತದಲ್ಲೂ ಈ ಸರ್ಕಾರದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇಂದು ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧಕ್ಕೆ ವಾಹನಗಳಲ್ಲಿ ತೆರಳುತ್ತಿದ್ದೇವೆ. ಎಲ್ಲ ಶಾಸಕರುಗಳು ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಯಾವುದೇ ದಾಖಲೆ ಇಲ್ಲದೇ ನಮ್ಮ ಸರ್ಕಾರವನ್ನು 10% ಸರ್ಕಾರ ಎಂದು ಹೇಳಿದ್ದರು. ಆದರೆ ಈಗ ಅವರ ಸರ್ಕಾರದ ವಿರುದ್ಧ ದಾಖಲೆಗಳೇ ಇವೆ. ಈ ವಿಚಾರವಾಗಿ ತನಿಖೆ ನಡೆಸಿ, ನಾವು ತಪ್ಪು ಮಾಡಿದ್ದರೆ ನಮ್ಮ ಅವಧಿಯಲ್ಲಿನ ಕಾಮಗಾರಿಗಳನ್ನು ಸೇರಿಸಿ ತನಿಖೆ ಮಾಡಿ ಎಂದು ಹೇಳುತ್ತಿದ್ದೇವೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಿಟಿ ರವಿ ಅಲ್ಲ ಲೂಟಿ ರವಿ, ಡಿಕೆ ಅಲ್ಲ ಕೆಡಿ – ಪರಸ್ಪರ ವಾಗ್ದಾಳಿ ನಡೆಸಿದ ನಾಯಕರು

40% ಕಮಿಷನ್ ಸೇರಿದಂತೆ ಹಲವು ವಿಚಾರಗಳಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದೆ. ನಾನು ಐದಾರು ವಿಷಯಗಳನ್ನು ಇಟ್ಟುಕೊಂಡಿದ್ದೇನೆ. ಈ ಭಾಗದ ರೈತರ ಬೆಳೆಹಾನಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಕೇಂದ್ರದ ಅನುದಾನ ಕಾಯದೆ ಅವರಿಗೆ ಪರಿಹಾರ ನೀಡಿ, ಮನೆ ಕಟ್ಟಿಕೊಡಿ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಅವರಿಗೆ ನಾವು ಧ್ವನಿ ಸೇರಿಸುತ್ತೇವೆ. ಇದುವರೆಗೂ ಒಬ್ಬರಿಗೂ ಒಂದು ಪೈಸೆ ಪರಿಹಾರ ಸಿಕ್ಕಿಲ್ಲ. ಕೋವಿಡ್‍ನಿಂದ ನಷ್ಟ ಅನುಭವಿಸಿದವರಲ್ಲಿ ಯಾರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಲಿ. ಸತ್ತವರಿಗೆ ಕೊಟ್ಟಿದ್ದಾರಾ? ಇಲ್ಲ. ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಬಂದಾಗ ನಾವು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸುಮಾರು 50 ಮಂದಿ ನೋವು ತೋಡಿಕೊಂಡಿದ್ದರು. ಈ ರೀತಿ ಎಲ್ಲ ಕ್ಷೇತ್ರದಲ್ಲೂ ಸರ್ಕಾರ ವಿಫಲವಾಗಿದೆ. ಈ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿದೆ ಎಂದು ಹೇಳಬೇಕಲ್ಲವೇ? ಹೀಗಾಗಿ ನಾವು ಒಂದು ದಿನ ರೈತರ ವಿಚಾರವಾಗಿ, ಮತ್ತೊಂದು ದಿನ ನೆರೆ ವಿಚಾರವಾಗಿ, ಈಗ ಭ್ರಷ್ಟಾಚಾರ ಹಾಗೂ 40% ಕಮಿಷನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

ಇದು ಕೇವಲ ಬಿಜೆಪಿ ಸರ್ಕಾರವಲ್ಲ, ಸಂಯುಕ್ತ ಸರ್ಕಾರ. ಇದಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿದೆ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಜನರನ್ನು ಕರೆದುಕೊಂಡು ಹೋಗಬೇಕಾಗಿಲ್ಲ. ಜನ ಮತ ಹಾಕುವ ಮೂಲಕ ನಮಗೆ ಬೆಂಬಲ ನೀಡಿದ್ದಾರೆ ಎಂದರು.

ಯಡಿಯೂರಪ್ಪ ಅಭಿಮತಕ್ಕೆ ಸಹಮತ:
ನೆರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈಗಾಗಲೇ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ನಾನು ಧ್ವನಿಗೂಡಿಸಿದ್ದೇನೆ, ಅವರ ಅಭಿಮತಕ್ಕೆ ನಮ್ಮ ಸಹಮತ ಇದೆ ಎಂದರು. ಇದನ್ನೂ ಓದಿ: ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತನ್ನಿ: ಸರ್ಕಾರಕ್ಕೆ ಆಡಳಿತ ಪಕ್ಷದ ಸದಸ್ಯರಿಂದಲೇ ಆಗ್ರಹ

ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಇದೆ. ಹೀಗಾಗಿ ಈಗ ಈ ಕಾಯ್ದೆ ಯಾಕೆ ಬೇಕು? ಬಿಜೆಪಿಯವರಿಗೆ ಮೇಲಿಂದ ಮೇಲೆ ಚುನಾವಣೆ ಸೋಲನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಈ ಸರ್ಕಾರದ ವಿರುದ್ಧ ಜನ ಬೇಸತ್ತು ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಏನೇನೋ ಆಟ ಆಡುತ್ತಿದ್ದಾರೆ. ಅದೆಲ್ಲ ಕಾನೂನಿನಲ್ಲಿ ಮಾಡಲು ಸಾಧ್ಯವಿಲ್ಲ. ಅವರಲ್ಲೇ ಸಾಕಷ್ಟು ಸಮಸ್ಯೆ ಇದೆ. ಜೈನ, ಬೌದ್ಧ, ಕ್ರೈಸ್ತ, ಹಿಂದೂಗಳಲ್ಲಿ ಮತಾಂತರವಿದೆ. ಈಗ 10 ವರ್ಷ ಜೈಲು ಎಂದು ಮಾಡಲು ಹೊರಟಿದ್ದಾರೆ ಎಂದು ಮಾಧ್ಯಮದಲ್ಲಿ ನೋಡಿದೆ. ರಾಜ್ಯದ ನೆಮ್ಮದಿಗೆ ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.

ಭಾವನಾತ್ಮಕವಾಗಿ ದಾರಿ ತಪ್ಪಿಸುವ ಹುನ್ನಾರ:
ಬಿಜೆಪಿ ಸರ್ಕಾರ ಜನರನ್ನು ಭಾವನಾತ್ಮಕವಾಗಿ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಅವರು ಹೇಳಿರುವಂತೆ ನಾವೆಲ್ಲಾ ಹಿಂದೂಗಳು. ಗಾಂಧಿ ಹಿಂದೂ, ರಾಮ ಹಿಂದೂ. ಆದರೆ ಬಿಜೆಪಿ ಅವರದ್ದು ಹಿಂದುತ್ವ. ರಾಮಾಯಣದಲ್ಲಿ ಬಹಳ ಪಾವಿತ್ರತೆ ಇರುವ ಸೀತೆಯ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಸೀತಾರಾಮ, ಜೈರಾಮ್ ಎನ್ನುವ ನಾವು ಹಿಂದೂಗಳಲ್ಲವೇ?. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕರನ್ನು ಅಮಾನತು ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 15 ಶಾಸಕರನ್ನು ಕಲಾಪದಿಂದ ಹೊರಗಿಡುವ ಮೂಲಕ ಇತಿಹಾಸ ಬರೆಯಲಾಗಿದೆ. ಒಬ್ಬ ಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದರೆ, ಅದರ ಬಗ್ಗೆ ನೋಟೀಸ್ ಕೊಟ್ಟು ಚರ್ಚೆ ಮಾಡಬೇಕು ಎಂದರೆ, ಆ ರೀತಿ ಮಾಡಿದರೆ ನಿಮ್ಮನ್ನು ಅಮಾನತು ಮಾಡುತ್ತೇವೆ ಎಂದು ಹೇಳಿದ್ದು ಎಲ್ಲಾದರೂ ಉಂಟೇ? ಇದು ಯಾವ ಸರ್ಕಾರ? ಇದು ಪ್ರಜಾಪ್ರಭುತ್ವದ ಸರ್ಕಾರವಾ? ಏನಿದು? ನನಗೆ ಆಶ್ಚರ್ಯ ಎಂದರೆ ಹೊರಟ್ಟಿ ಅವರು 7 ಬಾರಿ ಪರಿಷತ್ತಿನಲ್ಲಿ ಗೆದ್ದವರು. ಅವರು ಸಭಾಪತಿಗಳು. ಜನರ ಪರವಾಗಿ ಧ್ವನಿ ಎತ್ತಲು ನಾವು ಬಂದಿದ್ದೇವೆ. ಜನರ ಧ್ವನಿ, ಭಾವನೆ ಪರವಾಗಿ ನಾವು ಹೋರಾಡುತ್ತೇವೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಬೆಳಗಾವಿಯಲ್ಲಿ ಸಾವಿರಾರು ಜನ ಸುವರ್ಣಸೌಧದ ಬಳಿ ಧರಣಿ ಮಾಡುತ್ತಿದ್ದಾರೆ ಎಂದು ಗುಡುಗಿದರು.

Comments

Leave a Reply

Your email address will not be published. Required fields are marked *