ಸಿದ್ದರಾಮಯ್ಯಗೆ ತಿರುಗೇಟು ನೀಡಿ ಖಜಾನೆ ಸತ್ಯ ಒಪ್ಪಿಕೊಂಡ ಬಿಜೆಪಿ

ಬೆಂಗಳೂರು: ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಗುರುವಾರವಷ್ಟೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದು, ಇಂದು ಇದನ್ನು ಬಿಜೆಪಿ ಕೂಡ ಒಪ್ಪಿಕೊಂಡಿದೆ.

ಬಿಎಸ್‍ವೈ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಬಿಜೆಪಿ, ಇದು ರಾಜ್ಯದ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡುವ ಮೂಲಕ ಸತ್ಯತವನ್ನು ಒಪ್ಪಿಕೊಂಡಿದೆ.

ಬಿಜೆಪಿ ಟ್ವೀಟ್ ನಲ್ಲೇನಿದೆ..?
ರಾಜ್ಯದ ಬೊಕ್ಕಸ ಖಾಲಿಯಾಗಲು ಯಾರು ಕಾರಣ ಮಾನ್ಯ ಸಿದ್ದರಾಮಯ್ಯನವರೇ?. ಐದು ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಿದ್ದು ನಂತರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದ ಖಜಾನೆ ಲೂಟಿಗೈದಿದ್ದೇ ಇಂದಿನ ಈ ಸ್ಥಿತಿಗೆ ಕಾರಣ ಎಂದು ರಾಜ್ಯದ ಜನತೆಗೆ ತಿಳಿದೇ ಇದೆ ಅಂತ ಸಿದ್ದರಾಮಯ್ಯರನ್ನು ಟ್ಯಾಗ್ ಮಾಡಿ ಬಿಜೆಪಿ ಬರೆದುಕೊಂಡಿದೆ.

ಸಿದ್ದರಾಮಯ್ಯ ಹೇಳಿದ್ದೇನು..?
ಸನ್ಮಾನ್ಯ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೇ, ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ. ಹೀಗಾಗಿ ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ. ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ ಎಂದು ಬರೆದುಕೊಂಡು ಪಬ್ಲಿಕ್ ಟಿವಿಯಲ್ಲಿ ರಾಜ್ಯದ ಬೊಕ್ಕಸ ಖಾಲಿ ಎಂದು ಪ್ರಸಾರವಾದ ಸುದ್ದಿಯ ಕೆಲ ಸ್ಕ್ರೀನ್ ಶಾಟ್‍ಗಳನ್ನು ಪೋಸ್ಟ್ ಮಾಡಿ ಕರ್ನಾಟಕ ಸಿಎಂ, ಬಿಎಸ್‍ವೈ ಹಾಗೂ ಕರ್ನಾಟಕ ಕಾಂಗ್ರೆಸ್‍ಗೆ ಟ್ಯಾಗ್ ಮಾಡಿದ್ದಾರೆ.

ಅಲ್ಲದೆ ಸನ್ಮಾನ್ಮ ಬಿಎಸ್‍ವೈ ಬಿಜೆಪಿ ಅವರೇ, ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿಕೊಡುತ್ತೀರಿ?. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ ನರೇಂದ್ರ ಮೋದಿ ಸರ್ಕಾರಕ್ಕಿಲ್ಲ. ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ. ಆರ್ಥಿಕವಾಗಿ ಮಾತ್ರವಲ್ಲ, ಬೌದ್ಧಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಬರೆದು ಬಿಎಸ್‍ವೈ ಹಾಗೂ ನರೇಂದ್ರ ಮೋದಿಗೆ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.

ರಾಜ್ಯದ ಬೊಕ್ಕಸ ಖಾಲಿ?
ರಾಜ್ಯದಲ್ಲಿ ನೆರೆಯಿಂದ ಉಂಟಾಗಿರುವ ಬೆಳೆಹಾನಿ ಪರಿಹಾರಕ್ಕೆ ಹಣ ನೀಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪನವರು ಗುರುವಾರ ಬೆಳಗಾವಿಯಲ್ಲಿ ಪರೋಕ್ಷವಾಗಿ ಹೇಳಿದ್ದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಿಎಂ ಬಿಎಸ್‍ವೈ ಅವರ ನೇತೃತ್ವದಲ್ಲಿ ಪ್ರವಾಹ ಪರಿಹಾರ ಕಾರ್ಯಗಳ ಪರಿಶೀಲನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ ಅವರು ಬೆಳೆಹಾನಿಯಾಗಿರುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದ್ದರು. ಈ ಪ್ರಶ್ನೆಗೆ ಅಸಹಾಯಕ ಉತ್ತರ ನೀಡಿದ ಸಿಎಂ, ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಲಿದೆ. ಕೇಂದ್ರದ ನಿಯಮಗಳ ಅನ್ವಯ ಬೆಳೆಹಾನಿ ಪರಿಹಾರ ನೀಡುತ್ತೇವೆ ಎಂದು ಉತ್ತರಿಸಿದ್ದರು.

Comments

Leave a Reply

Your email address will not be published. Required fields are marked *