3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ

ಬೆಂಗಳೂರು: ಪ್ರತಿ ಬಾರಿ ಎಲೆಕ್ಷನ್ ಬಂದ ಸಂದರ್ಭದಲ್ಲಿ ಯಾರು ಶ್ರೀಮಂತ ರಾಜಕಾರಣಿ ಎನ್ನುವ ಲೆಕ್ಕಾಚಾರ ಶುರುವಾಗುತ್ತೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗಳ ಶ್ರೀಮಂತರ ಸಾಲಿನ ಪಟ್ಟಿಯಲ್ಲಿ ಅಚ್ಚರಿಯ ಹೆಸರು ಕಾಣಿಸಿಕೊಂಡಿದೆ.

ನಗರದ ಬೊಮ್ಮನಹಳ್ಳಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪಿ ಅನಿಲ್ ಕುಮಾರ್ ಈ ಸಾಲಿನಲ್ಲಿ ಕಾಣಿಸಿಕೊಂಡಿರುವ ಪ್ರಭಾವಿ ವ್ಯಕ್ತಿ. ಇವರು ಚುನಾವಣೆಗೆ ಸ್ಪರ್ಧೆಗೆ ನಿಂತಿದ್ದು ಈ ವೇಳೆ ಅವರು ಘೋಷಿಸಿಕೊಂಡಿರುವ ಆಸ್ತಿ ಈಗ ಎಲ್ಲರ ಹುಬ್ಬೇರಿಸಿದೆ.

ಪಿ ಅನಿಲ್ ಕುಮಾರ್ ಮೂಲತಃ ಕೇರಳ ಮೂಲದವರಾದರು 40 ವರ್ಷದಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ. ಸದ್ಯ ಇವರು ಘೋಷಣೆ ಮಾಡಿಕೊಂಡಿರುವ ಆಸ್ತಿ ಮೌಲ್ಯ ಬರೊಬ್ಬರಿ 339 ಕೋಟಿ ರೂಪಾಯಿ. ಆದರೆ ಅನಿಲ್ ಕುಮಾರ್ ಓದಿರುವುದು ಕೇವಲ 3ನೇ ಕ್ಲಾಸ್ ಮಾತ್ರ.

ಚಿಕ್ಕ ವಯಸ್ಸಲ್ಲೇ ಕೆಲಸ ಹುಡುಕಿ ಬೆಂಗಳೂರಿಗೆ ಬಂದ ಅನಿಲ್ ಕುಮಾರ್, ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶಸ್ಸು ಕಂಡು ಶ್ರೀಮಂತರಾಗಿದ್ದಾರೆ. ಸದ್ಯ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿರುವ ಮಾಹಿತಿ ಪ್ರಕಾರ ಅನಿಲ್ ಅವರ ಪತ್ನಿ ಸಂಧ್ಯಾ ಹೆಸರಲ್ಲಿ 50 ಕೋಟಿ 91 ಲಕ್ಷ ರೂಪಾಯಿ ಆಸ್ತಿ ಇದೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು ತಾನು ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ವಹಿಸಬೇಕಾದ ಸಂದರ್ಭದಲ್ಲಿ ಟೀ ಮಾರಾಟ ಆರಂಭ ಮಾಡಿದೆ. ಆ ವೇಳೆ ಬೆಂಗಳೂರಿನಲ್ಲಿ ವಿಪ್ರೋ ಸಂಸ್ಥೆ ಆರಂಭವಾಯಿತು. ಹಲವು ಬಹು ದೊಡ್ಡ ಸಂಸ್ಥೆಗಳಿಗೆ ಟೀ ಮಾರಾಟ ಮಾಡಿದ್ದೇನೆ. ಬಳಿಕ ರಿಯಲ್ ಎಸ್ಟೇಟ್ ಆರಂಭ ಮಾಡಿದೆ. ಅದು ನನ್ನ ಕೈ ಹಿಡಿಯಿತು. ಸದ್ಯ ನನ್ನ ಆಸ್ತಿಯ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದರು.

ಕಳೆದ 35 ವರ್ಷಗಳಿಂದ ತಾನು ಈ ಕ್ಷೇತ್ರದಲ್ಲಿ ವಾಸವಾಗಿದ್ದೇನೆ. ಆದರೆ ಬಡವರ ಪರ ಯಾವುದೇ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಜನರ ಮತವನ್ನು ಹಣ ನೀಡಿ ಪಡೆದುಕೊಳುತ್ತಿದ್ದಾರೆ. ಆದ್ರೆ ಅದಕ್ಕೆ ಪ್ರತಿಫಲವಾಗಿ ಜನರ ಸೇವೆ ಮಾಡುತ್ತಿಲ್ಲ. ಬಡವರ ಸೇವೆಯೇ ನನ್ನ ಮೂಲ ಉದ್ದೇಶವಾಗಿದ್ದು, ಬೊಮ್ಮನಹಳ್ಳಿ ಕೇತ್ರದ ಜನರು ಚುನಾವಣೆಯಲ್ಲಿ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *