ರಾಜ್ಯದ ಜನತೆಗೆ ಗ್ಯಾರಂಟಿ ಶಾಕ್ – ದರ ಏರಿಕೆಗೆ ಸರ್ಕಾರ ಹೇಳೋದು ಏನು?

ಬೆಂಗಳೂರು: ಪಂಚ ಗ್ಯಾರಂಟಿಗಳ (Congress Guarantee) ಭಾರದಿಂದ ಹೈರಾಣಾದಂತೆ ಕಾಣುತ್ತಿರುವ ಸಿದ್ದರಾಮಯ್ಯ (Siddaramaiah) ಸರ್ಕಾರ ನಿರೀಕ್ಷೆಯಂತೆಯೇ ರಾಜ್ಯದ ಜನತೆಗೆ ಹೊಸ ವರ್ಷದಲ್ಲಿ ಮೊದಲ ಶಾಕ್ ನೀಡಿದೆ. ಹಾಲು, ನೀರು, ವಿದ್ಯುತ್ ಜೊತೆಗೆ ಬಸ್ ಪ್ರಯಾಣ (KSRTC Bus Fare) ತುಟ್ಟಿ ಆಗಬಹುದು ಎಂದು ಬುಧವಾರ ನಿಮ್ಮ ಪಬ್ಲಿಕ್ ಟಿವಿ ಹೇಳಿತ್ತು. ಅದೀಗ ನಿಜವಾಗ್ತಿದೆ. ಮೊದಲ ಹಂತದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಲು ಇಂದಿನ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಡೀಸೆಲ್ ಬೆಲೆ ಹೆಚ್ಚಳ, ಮತ್ತಿತರೆ ಕಾರಣಗಳನ್ನು ನೀಡಿ, ಬಿಎಂಟಿಸಿ 42%, ಕೆಎಸ್‌ಆರ್‌ಟಿಸಿ 28%, ಕೆಕೆಆರ್‌ಟಿಸಿ 28% ಮತ್ತು ವಾಯುವ್ಯ ಸಾರಿಗೆ 25% ಪ್ರಯಾಣ ದರ ಹೆಚ್ಚಿಸಬೇಕು ಎಂಬ ಪ್ರಸ್ತಾವನೆ ಮಂಡಿಸಿದ್ದವು. ಈ ನಾಲ್ಕು ಪ್ರಸ್ತಾವನೆಯನ್ನು ಅಳೆದುತೂಗಿದ ಸಂಪುಟ 15% ರಷ್ಟು ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಜನವರಿ 5 ರಿಂದಲೇ ಇದು ಜಾರಿ ಆಗಲಿದೆ. ಇದನ್ನೂ ಓದಿ: ಬಾಣಂತಿಯರಿಗೆ ಬದುಕುವ ಗ್ಯಾರಂಟಿ ನೀಡಿ: ಅಶೋಕ್ ಕಿಡಿ

ನಿರೀಕ್ಷೆಯಂತೆಯೇ ಇದಕ್ಕೆ ಜನಸಾಮಾನ್ಯರಿಂದ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರಿಗೆ ಫ್ರೀ ಕೊಟ್ಟು ಪುರುಷರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಕೆಲವರು ಹೇಳಿದರೆ ನಾವು ಆಯ್ಕೆ ಮಾಡಿದ್ದಕ್ಕೆ ಇದನೇಲ್ಲ ಅನುಭವಿಸಬೇಕು ಅಂತಾ ಇನ್ನೊಬ್ರು ಕಿಡಿಕಾರಿದ್ದಾರೆ. ಇದು ಗ್ಯಾರಂಟಿ ಎಫೆಕ್ಟ್ ಎಂದು ಬಿಜೆಪಿಗರು ಗರಂ ಆಗಿದ್ದಾರೆ. ಇದನ್ನೂ ಓದಿ: ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ

ಶಕ್ತಿ ಯೋಜನೆಗೆ (Shakti Scheme) ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ಇದನ್ನು ಕೂಡಲೇ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಕನ್ನಡಿಗರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಆಗುತ್ತೆ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

 

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಬಿಜೆಪಿಯವರು ಸಾಲ ಹೊರೆಸಿ ಹೋದ ಪರಿಣಾಮವಿದು ಎಂದು ವ್ಯಾಖ್ಯಾನಿಸಿದ್ದಾರೆ.. ಜನರ ಆಕ್ರೋಶವನ್ನು ಸಹಜ ಎಂದಿದ್ದಾರೆ.

ದರ ಏರಿಕೆ ಸರ್ಕಾರದ ಕಾರಣ ಏನು?
ಐದು ವರ್ಷದಿಂದ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೆಚ್ಚಿಸಿಲ್ಲ. ಹತ್ತು ವರ್ಷದಿಂದ ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಿಲ್ಲ. ಈ ಅವಧಿಯಲ್ಲಿ ಲೀಟರ್ ಡಿಸೇಲ್ ಬೆಲೆ 100 ರೂ. ಆಗಿದೆ. ತುಟ್ಟಿ ಭತ್ಯೆ ಹೆಚ್ಚಳವಾಗಿದೆ, ನಿರ್ವಹಣಾ ವೆಚ್ಚ ಏರಿಕೆಯಾಗಿದೆ.

4 ಸಾರಿಗೆ ನಿಗಮಗಳು ಭಾರೀ ನಷ್ಟದಲ್ಲಿದ್ದು 5,527 ಕೋಟಿ ರೂ. ಹಿಂಬಾಕಿ ಪಾವತಿಸಬೇಕಿದೆ. 6,330 ಕೋಟಿ ರೂ.ಹೆಚ್ಚುವರಿ ಹೊಣೆಗಾರಿಕೆ ಬಾಕಿಯಿದೆ. ಸದ್ಯ 15% ಪ್ರಯಾಣ ದರ ಹೆಚ್ಚಿಸಿದರೂ 1,800 ಕೋಟಿ ರೂ. ನಷ್ಟ ಆಗಲಿದೆ.