ತುಳು ಭಾಷೆ, ತುಳುನಾಡಿನ ಜನರ ವಿರುದ್ಧ ನಿಂದನೆ- ಕರವೇ ಮುಖಂಡನ ವಿರುದ್ಧ ಆಕ್ರೋಶ

ಮಂಗಳೂರು: ಕರಾವಳಿಯ ತುಳು ಭಾಷೆ ಮತ್ತು ತುಳುನಾಡಿನ ಜನರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡನೊಬ್ಬ ಅಶ್ಲೀಲ ಭಾಷೆಯಲ್ಲಿ ನಿಂದಿಸಿರುವುದು ಇದೀಗ ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.

ಕರವೇ ನಾರಾಯಣ ಗೌಡ ಬಣದ ಬೆಂಗಳೂರು ನಗರ ಕಾರ್ಯದರ್ಶಿ ಅಂತ ಹೇಳ್ಕೊಂಡಿರೋ ಜಾನ್ ಕರವೇ ಎಂಬಾತ ಫೇಸ್‍ಬುಕ್ ನಲ್ಲಿ ಈ ರೀತಿಯ ಅವಹೇಳನ ಮಾಡಿದ್ದಾನೆ. ತುಳು ಭಾಷೆ ಮಾತನಾಡೋರು ಆಂಗ್ಲರ ಸಂತಾನದವರು. ಗೋವಾದ ಮೂಲಕ ಆಂಗ್ಲರು ಬಂದಾಗ ಕರ್ನಾಟಕಕ್ಕೆ ಆಶ್ರಯ ಬೇಡಿ ಬಂದ ನರಿಗಳು. ನೀವು ಕನ್ನಡಿಗರ ಎಕ್ಕಡ.. ಹೀಗೆ ತೀರಾ ಅವಾಚ್ಯವಾಗಿ ನಿಂದಿಸಿ ಬರೆದಿರುವುದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕೊಡಗಿನಲ್ಲೂ ತುಳು ಭಾಷೆಯ ಬಗ್ಗೆ ಅವಮಾನಿಸಿದ್ದನ್ನು ಖಂಡಿಸಲಾಗಿದ್ದು, ಕೊಡವ ನಾಡ ಅಟೊನಾಮಸ್ ಕೌನ್ಸಿಲ್ ಟ್ರಸ್ಟ್ ಎಸ್‍ಪಿಗೆ ದೂರು ನೀಡಿದೆ. ಜಾನ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ಇತ್ತ ಕರಾವಳಿಯಲ್ಲೂ ವಿವಿಧ ಸಂಘಟನೆಗಳು ಜಾನ್ ವರ್ತನೆಯನ್ನು ಖಂಡಿಸಿದ್ದು, ಕೂಡಲೇ ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕರಾವಳಿ ಘಟಕ ಕೂಡ ಜಾನ್ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತುಳುವರು ತಿರುಗಿ ಬಿದ್ದರೆ ನಿನ್ ಸಂಘಟನೆ ಇರಲ್ಲ ಅಂತಾ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *