ಪಾಕಿಸ್ತಾನದಲ್ಲಿ ಹೊತ್ತಿ ಉರಿದ ರೈಲು – 65ಕ್ಕೂ ಹೆಚ್ಚು ಪ್ರಯಾಣಿಕರು ಸಾವು

ಇಸ್ಲಾಮಾಬಾದ್: ಕರಾಚಿ- ರಾವಲ್ಪಿಂಡಿ ತೇಜ್ಗಾಮ್ ಎಕ್ಸ್‌ಪ್ರೆಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ರೈಲಿನ ಮೂರು ಬೋಗಿಗಳು ಬೆಂಕಿಗೆ ಧಗಧಗನೆ ಹೊತ್ತಿ ಉರಿದಿದೆ. ಈ ಅಗ್ನಿ ಅವಘಡದಲ್ಲಿ 65ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ ಈ ಅಗ್ನಿ ಅವಘಡ ಸಂಭವಿಸಿದೆ. ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ರೈಲಿನಲ್ಲಿ ಗ್ಯಾಸ್ ಸ್ಟವ್ ಹೊತ್ತಿಸಿ ಅಡುಗೆ ಮಾಡುತ್ತಿದ್ದರು. ದಕ್ಷಿಣ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ಪ್ರದೇಶದ ಸಮೀಪ ರೈಲು ಬರುತ್ತಿದ್ದ ವೇಳೆ ಸ್ಟವ್ ಸ್ಫೋಟಗೊಂಡಿದ್ದು, ಒಂದು ಬೋಗಿಗೆ ಬೆಂಕಿ ಹೊತ್ತಿಕೊಂಡಿತು. ಬಳಿಕ ಈ ಬೆಂಕಿ ರೈಲಿನ ಇತರೆ ಬೋಗಿಗಳಿಗೂ ತಗುಲಿ ಒಟ್ಟು ಮೂರು ಬೋಗಿಗಳು ಬೆಂಕಿ ಕೆನ್ನಾಲಿಗೆಯಲ್ಲಿ ಹೊತ್ತಿ ಉರಿದವು. ಈ ವೇಳೆ ಈ ಬೋಗಿಗಳಲ್ಲಿ ಇದ್ದ 65 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೃತಪಟ್ಟ ಪ್ರಯಾಣಿಕರಲ್ಲಿ ಅನೇಕರು ಬೆಂಕಿ ಕಂಡು ಭಯದಿಂದ ರೈಲಿನಿಂದ ಹಾರಿ ಜೀವ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಪ್ರತಿಕ್ರಿಯಿಸಿ, ರೈಲಿನಲ್ಲಿ ಪ್ರಯಾಣಿಕರು ಅಡುಗೆ ಮಾಡುತ್ತಿದ್ದರು. ಈ ವೇಳೆ ಅವರ ಅಡುಗೆ ಎಣ್ಣೆಯಿಂದ ಸ್ಟವ್‍ಗೆ ಬೆಂಕಿ ಹರಡಿ ಅದು ಸ್ಫೋಟಗೊಂಡಿತು. ಬಳಿಕ ರೈಲು ಹೊತ್ತಿ ಉರಿಯಿತು ಎಂದರು. ಹಾಗೆಯೇ ಸಾವನ್ನಪ್ಪಿದವರಲ್ಲಿ ಅನೇಕರು ಬೆಂಕಿ ಕಂಡು ಭಯದಿಂದ ಚಲಿಸುತ್ತಿದ್ದ ರೈಲಿನಿಂದ ಹೊರಹಾರಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾ ರಕ್ಷಣಾ ಸೇವೆಯ ಮುಖ್ಯಸ್ಥರಾದ ಬಕೀರ್ ಹುಸ್ಸೇನ್ ಅವರು ಮಾತನಾಡಿ, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ 15 ಮಂದಿ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹಾಗೆಯೇ ದೂರ ಪ್ರಯಾಣ ಮಾಡುವ ಪ್ರಯಾಣಿಕರು ಆಹಾರವನ್ನು ತಯಾರಿಸಲು ರೈಲಿನಲ್ಲಿ ಗ್ಯಾಸ್ ಸ್ಟವ್ ಬಳಸುತ್ತಾರೆ. ಇದು ಇಲ್ಲಿನ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.

ದೀರ್ಘಕಾಲದ ಹೂಡಿಕೆ ಹಾಗೂ ಕಳಪೆ ನಿರ್ವಹಣೆಯಿಂದ ಇತ್ತೀಚಿನ ದಶಕಗಳಲ್ಲಿ ಪಾಕಿಸ್ತಾನದ ರೈಲ್ವೆ ಜಾಲವು ದುಸ್ಥಿತಿಗೆ ತಲುಪಿದೆ. ಈ ಹಿಂದೆ ಪಾಕಿಸ್ತಾನದಲ್ಲಿ ಜುಲೈನಲ್ಲಿ ನಡೆದ ರೈಲು ಅಪಘಾತದಲ್ಲಿ 11 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಹಾಗೆಯೇ ಸೆಪ್ಟೆಂಬರ್‍ನಲ್ಲಿ ನಡೆದಿದ್ದ ಅಪಘಾತದಲ್ಲಿ 4 ಮಂದಿ ಜೀವ ಕಳೆದುಕೊಂಡಿದ್ದರು. 2005ರಲ್ಲಿ ಸಿಂಧ್ ಪ್ರಾಂತ್ಯದಲ್ಲಿ ನಡೆದಿದ್ದ ರೈಲು ಅಪಘಾತದಲ್ಲಿ 130 ಮಂದಿ ಪ್ರಯಾಣಿಕರು ಬಲಿಯಾಗಿದ್ದರು.

Comments

Leave a Reply

Your email address will not be published. Required fields are marked *