ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

ಬೆಂಗಳೂರು: ಹೊಸ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಅಲ್ಲಿ ಹೊಸತನದ ಜಾತ್ರೆಯೇ ನೆರೆಯುತ್ತದೆಂಬಂಥಾ ನಂಬಿಕೆ ಕನ್ನಡ ಪ್ರೆಕ್ಷಕರಲ್ಲಿದೆ. ಇತ್ತೀಚೆಗೆ ಬಂದ ಬಹುತೇಕ ಹೊಸ ತಂಡಗಳು ಇಂಥಾ ವಿಶಿಷ್ಟ ಕಂಟೆಂಟಿನ ಸಿನಿಮಾಗಳ ಮೂಲಕ ಈ ನಂಬಿಕೆಯನ್ನು ಗಟ್ಟಿಗೊಳಿಸಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಮೂಲಕವೇ ಮತ್ತೊಂದು ಹೊಸಾ ತಂಡದಿಂದ ರೂಪಿಸಲ್ಪಟ್ಟಿರೋ ‘ಕಪಟನಾಟಕ ಪಾತ್ರಧಾರಿ’ ಎಂಬ ಚಿತ್ರ ಸೌಂಡು ಮಾಡಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಮತ್ತೆ ಪ್ರೇಕ್ಷಕರನ್ನಾವರಿಸಿಕೊಂಡಿದೆ.

ಈ ಹಾಡನ್ನು ಸಂಗೀತ ನಿರ್ದೇಶಕ ಆದಿಲ್ ನದಾಫ್ ರೂಪಿಸಿರೋ ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಹಸಿದಾ ಶಿಕನು ಬೇಟೆಯಾಡಿದೆ ಒಡಲಾ ಕಸಿದು ಸೂರೆ ಮಾಡಿದೆ ಎಂಬ ಈ ಹಾಡನ್ನು ಚಾಣಕ್ಯ ಬರೆದಿದ್ದಾರೆ. ಇಶಾ ಸುಚಿ ಅಷ್ಟೇ ಆಪ್ತವಾಗಿ ಇದಕ್ಕೆ ಧ್ವನಿಯಾಗಿದ್ದಾರೆ. ಸಾಹಿತ್ಯದಲ್ಲಿಯೇ ವಿಶೇಷವಾದ ಅಂಶಗಳನ್ನೊಳಗೊಂಡಿರೋ ಈ ಹಾಡನ್ನು ಆದಿಲ್ ನದಾಫ್ ಅದಕ್ಕೆ ತಕ್ಕುದಾದ ಸಂಗೀತ ಸ್ಪರ್ಶದೊಂದಿಗೆ ಸಮ್ಮೋಹಕವಾಗಿ ರೂಪಿಸಿದ್ದಾರೆ. ಒಂದೇ ಸಲಕ್ಕೆ ಇಷ್ಟವಾಗುವಂತಿರೋ ಈ ಲಿರಿಕಲ್ ಸಾಂಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿಯೇ ಹರಿದಾಡುತ್ತಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

ವಿಶೇಷವೆಂದರೆ, ಕಪಟನಾಟಕ ಪಾತ್ರಧಾರಿ ತಂಡ ಈ ಹಾಡುಗಳ ಮೂಲಕವೇ ಕಥೆಯ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂಥಾ ಪಟ್ಟುಗಳನ್ನು ಪ್ರದರ್ಶಿಸುತ್ತಿದೆ. ಕಳೆದ ಬಾರಿ ಬಂದಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಮತ್ತು ಈಗ ಬಿಡುಗಡೆಯಾಗಿರೋ ಈ ಹಾಡು ಕೂಡಾ ಕಥೆಯ ಬಗ್ಗೆಯೇ ಪ್ರೇಕ್ಷಕರ ದೃಷ್ಟಿ ಹೊರಳುವಂತೆ ಮಾಡುವಲ್ಲಿ ಗೆದ್ದಿವೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿರೋ ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *