ವಿದ್ಯಾವಾರೀಧಿ ತೀರ್ಥರ ಕಾಮ ಪುರಾಣದ ಬಳಿಕ ಕೊಪ್ಪಳದ ಮನೆ ಖಾಲಿ ಮಾಡಿದ ಕುಟುಂಬಸ್ಥರು

ಕೊಪ್ಪಳ: ಯಾದಗಿರಿಯ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ ಪೀಠಾಧಿಪತಿ ಶ್ರೀ ವಿದ್ಯಾವಾರೀಧಿ ತೀರ್ಥ ಸ್ವಾಮೀಗಳ ಕಾಮ ಪುರಾಣ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಕೊಪ್ಪಳದಲ್ಲಿದ್ದ ಸ್ವಾಮೀಜಿ ಕುಟುಂಬಸ್ಥರು ಮನೆ ಖಾಲಿ ಮಾಡಿದ್ದಾರೆ.

ವಿದ್ಯಾವಾರೀಧಿ ತೀರ್ಥರು ಮೂಲತಃ ಕೊಪ್ಪಳದವರು. ಕಳೆದ ಇಪ್ಪತ್ತು ವರ್ಷಗಳಿಂದ ಕೊಪ್ಪಳದಲ್ಲಿಯೇ ಸ್ವಾಮೀಜಿಯ ಕುಟುಂಬ ವಾಸವಾಗಿದೆ. ಕೊಪ್ಪಳ ನಗರದ ಸಾಯಿಬಾಬಾ ಮಂದಿರದ ಬಳಿ ವಿದ್ಯಾವಾರೀಧಿ ತೀರ್ಥರ ಮನೆ ಇತ್ತು. ಸ್ವಾಮೀಜಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗ ಇದ್ದಾನೆ. ಆದರೆ ಮಾಧ್ಯಮಗಳಲ್ಲಿ ಸ್ವಾಮೀಜಿಯ ಕಾಮ ಪುರಾಣದ ಬಗ್ಗೆ ವರದಿಯಾದ ನಂತರ ಅವರ ಕುಟುಂಬದವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಇದನ್ನೂ ಓದಿ:ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

ಸ್ವಾಮೀಜಿ ಮಹಿಳೆ ಜೊತೆ ಮಾತನಾಡಿದ ಆಡಿಯೋ, ವಿಡಿಯೋ ಕಾಲ್ ರೆರ್ಕಾಡ್, ವಾಟ್ಸಪ್ ಚಾಟ್ ಸ್ಕ್ರೀನ್ ಶಾರ್ಟ್‍ಗಳು ಸ್ವಾಮಿಯ ಅಕ್ರಮ ಸಂಬಂಧವನ್ನು ಬಟಾ ಬಯಲು ಮಾಡಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ.

ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್

ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾತುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.

ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‌ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‌ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *