‘ಕಾಂತಾರ ಚಾಪ್ಟರ್ 1’ರಲ್ಲಿ ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ: ರಾಕೇಶ್ ನಿಧನಕ್ಕೆ ರಿಷಬ್ ಶೆಟ್ಟಿ ಸಂತಾಪ

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ನಿಧನ ಚಿತ್ರರಂಗಕ್ಕೆ ಶಾಕ್ ನೀಡಿದೆ. ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ರಾಕೇಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ನಿನ್ನ ಪಾತ್ರ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ‘ಕಾಂತಾರ’ (Kantara Chapter 1) ಸಿನಿಮಾದಲ್ಲಿ ನಿನ್ನ ಪಾತ್ರ ಹಾಗೂ ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ. ಮತ್ತೆ ಹುಟ್ಟಿ ಬಾ ಗೆಳೆಯ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ ಎಂದು ರಾಕೇಶ್‌ ಬಗ್ಗೆ ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

ನಟ ರಾಕೇಶ್ ಪೂಜಾರಿ (Rakesh Poojari) ನಿಧನಕ್ಕೆ ತೀವ್ರ ಸಂತಾಪಗಳು. ಈ ನೋವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ, ಅವರ ಆಪ್ತರಿಗೆ ಹಾಗೂ ಹಿತೈಷಿಗಳಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಈ ದುಃಖದ ಘಳಿಗೆಯಲ್ಲಿ ನಾವೆಲ್ಲರೂ ಅವರ ಕುಟುಂಬದೊಂದಿಗೆ ಇದ್ದೇವೆ ಎಂದು ಕಾಂತಾರ ಸಿನಿಮಾ ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ ರಾಕೇಶ್ ಅಗಲಿಕೆಗೆ ಸಂತಾಪ ಸೂಚಿಸಿದೆ.

ಮೇ 12ರಂದು ರಾಕೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವೇಳೆ, ಅನುಶ್ರೀ, ರಕ್ಷಿತಾ ಪ್ರೇಮ್, ಯೋಗರಾಜ್ ಭಟ್, ಕಾಮಿಡಿ ಕಿಲಾಡಿಗಳು ತಂಡದ ಕಲಾವಿದರು ಭಾಗಿಯಾಗಿ ಅಂತಿಮ ದರ್ಶನ ಪಡೆದರು. ನಿನ್ನೆ ಸಂಜೆ ಉಡುಪಿ ಹೂಡೆಯ ರುದ್ರಭೂಮಿಯಲ್ಲಿ ಬಿಲ್ಲವ ಸಂಪ್ರದಾಯದಂತೆ ನಟನ ಅಂತ್ಯಕ್ರಿಯೆ ನಡೆಯಿತು.