ಬೆಂಗಳೂರು: ನಟಿ ಹರಿಪ್ರಿಯಾ ಎಂಬ ಹೆಸರು ಕೇಳಿದರೇನೇ ಭಿನ್ನ ಬಗೆಯ ಪಾತ್ರಗಳೇ ಪ್ರೇಕ್ಷಕರ ಕಣ್ಮುಂದೆ ಸುಳಿಯಲಾರಂಭಿಸುತ್ತವೆ. ಇಮೇಜಿನಾಚೆಗೆ ಓರ್ವ ಪರಿಪೂರ್ಣ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಿರೋ ಹರಿಪ್ರಿಯಾ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಮೂಲಕ ಮೊದಲ ಬಾರಿ ಸೃಜನ್ ಲೋಕೇಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಈವರೆಗೂ ಯಾವ ಸುಳಿವೂ ಸಿಗದಂತೆ ಎಚ್ಚರ ವಹಿಸುತ್ತಲೇ ಸಾಗಿ ಬಂದಿದೆ. ಹರಿಪ್ರಿಯಾ ಇದುವರೆಗಿನ ಸಿನಿಮಾಗಳಲ್ಲಿ ಆರಿಸಿಕೊಂಡಿರೋ ಪಾತ್ರಗಳ ಪರಿಚಯವಿರುವ ಪ್ರತಿಯೊಬ್ಬರಿಗೂ ಕೂಡಾ ಈ ಸಿನಿಮಾದಲ್ಲಿಯೂ ಅವರ ಪಾತ್ರ ವಿಶೇಷವಾಗಿರಲಿದೆಯೆಂಬ ನಂಬಿಕೆಯಿದೆ.

ಇದು ಸೃಜನ್ ಮತ್ತು ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿರೋ ಮೊದಲ ಚಿತ್ರ. ಯಾವುದೇ ಸಿನಿಮಾವಾದರೂ ಹಾಡುಗಳ ಮುಲಕವೇ ಪ್ರೇಕ್ಷಕರು ಅದರತ್ತ ಆಕರ್ಷಿತರಾಗೋದು ಸಾಮಾನ್ಯ ವಿದ್ಯಮಾನ. ಆದರೆ ಅದರಲ್ಲಿ ಯಶ ಕಾಣೋದು ಸಾಮಾನ್ಯ ಸಂಗತಿಯೇನಲ್ಲ. ಎಲ್ಲಿದ್ದೆ ಇಲ್ಲಿತನಕ ಚಿತ್ರ ಅದರಲ್ಲಿ ಯಶ ಕಂಡಿದೆ. ಈ ಹಾಡುಗಳ ಮೂಲಕವೇ ಹರಿಪ್ರಿಯಾ ಮತ್ತು ಸೃಜನ್ ಜೋಡಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಅದರಲ್ಲಿಯೂ ಹರಿಪ್ರಿಯಾ ಕಾಣಿಸಿಕೊಂಡಿರೋ ರೀತಿಯಂತೂ ಅವರ ಅಭಿಮಾನಿಗಳೇ ಖುಷಿಗೊಳ್ಳುವಂತೆ ಮಾಡಿದೆ.
ಹಾಡುಗಳಲ್ಲಿ ಹರಿಪ್ರಿಯಾ ರೊಮ್ಯಾಂಟಿಕ್ ಮೂಡಲ್ಲಿ ಕಾಣಿಸಿಕೊಂಡಿದ್ದಾರಲ್ಲಾ? ಅವರು ಇಡೀ ಸಿನಿಮಾದಲ್ಲಿ ಅದೇ ರೀತಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಬಗ್ಗೆ ಚಿತ್ರತಂಡ ಯಾವುದನ್ನೂ ನಿಖರವಾಗಿ ಹೇಳದೆ ಕುತೂಹಲ ಕಾಯ್ದಿಟ್ಟುಕೊಂಡಿದೆ. ಒಂದು ಮೂಲದ ಪ್ರಕಾರ ಈ ಸಿನಿಮಾದಲ್ಲಿ ಹರಿಪ್ರಿಯಾ ಪಾತ್ರಕ್ಕೆ ಬೇರೆ ಶೇಡುಗಳೂ ಇವೆಯಂತೆ. ಅದೇನೆಂಬುದು ನಿಜವಾದ ಸರ್‍ಪ್ರೈಸ್. ಅದೆಲ್ಲವೂ ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಒಟ್ಟಾರೆಯಾಗಿ ಈ ಮೂಲಕ ಸೃಜನ್ ಮತ್ತು ಹರಿಪ್ರಿಯಾ ಜೋಡಿ ಸಾರ್ವಕಾಲಿಕ ಮೋಡಿ ಮಾಡೋ ಲಕ್ಷಣಗಳೇ ಢಾಳಾಗಿವೆ.

Leave a Reply