ಕನ್ನಡಿಗ ಅರುಣ್ ಕುಮಾರ್ ಈಗ ಅಮೆರಿಕ ಕ್ರಿಕೆಟ್ ತಂಡದ ಕೋಚ್

ಬೆಂಗಳೂರು: ಕರ್ನಾಟಕ ತಂಡದ ಮಾಜಿ ಆಟಗಾರ, ತಂಡದ ಮಾಜಿ ಯಶಸ್ವಿ ಕೋಚ್ ಜೆ ಅರುಣ್ ಕುಮಾರ್ ಅವರು ಅಮೆರಿಕ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದಾರೆ.

ಯುಎಸ್‍ಎ ಕ್ರಿಕೆಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಯಾನ್ ಹಿಗ್ಗಿನ್ಸ್ ತಂಡದ ಅಧಿಕೃತ ವೆಬ್‍ಸೈಟ್‍ನಲ್ಲಿ ಅರುಣ್ ಕುಮಾರ್ ಆಯ್ಕೆಯಾದ ವಿಚಾರವನ್ನು ತಿಳಿಸಿದ್ದಾರೆ. ಕೆಲ ದಿನಗಳಿಂದ ಕೋಚ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಐಪಿಎಲ್ ಮಾಜಿ ಆಟಗಾರ, ಕೋಚ್ ಅರುಣ್ ಕುಮಾರ್ ಸೂಕ್ತ ವ್ಯಕ್ತಿ ಎಂದು ಭಾವಿಸಿ ಅವರನ್ನು ಆಯ್ಕೆ ಮಾಡಲಾಗಿದೆ. ಕೋವಿಡ್-19 ನಿಂದಾಗಿ ಸ್ವಲ್ಪ ತಡವಾದರೂ ಮುಂದೆ ಹ್ಯೂಸ್ಟನ್ ನಲ್ಲಿ ಕ್ಯಾಂಪ್ ನಲ್ಲಿ ಆಟಗಾರರಿಗೆ ತರಬೇತಿ ನೀಡಲಿದ್ದಾರೆ ಎಂದು ಐಯಾನ್ ಹಿಗ್ಗಿನ್ಸ್ ಹೇಳಿದ್ದಾರೆ.

 

 

ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಕುಮಾರ್, ಅಮೆರಿಕದಲ್ಲಿ ಕೊರೊನಾ ವೈರಸ್ ಕಡಿಮೆಯಾಗಿ ವೀಸಾ ಸಿಕ್ಕಿದ ನಂತರ ಅಲ್ಲಿಗೆ ತೆರಳುತ್ತೇನೆ. ಟೆಸ್ಟ್ ಗೆ ಅಮೆರಿಕ ತಂಡವನ್ನು ತಯಾರಿ ಮಾಡುವುದು ನನ್ನ ಮೊದಲ ಗುರಿ. ಸಿಕ್ಕಿರುವ ಕಡಿಮೆ ಅವಧಿಯಲ್ಲಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಗೆಲ್ಲುವಂತೆ ಮಾಡಬೇಕಿದೆ. ತಂಡದ ಗುಣಮಟ್ಟವನ್ನು ಹೆಚ್ಚಿಸಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ರಣಜಿ ತಂಡದಲ್ಲಿ ‘ಜಾಕ್’ ಎಂದೇ ಪ್ರಸಿದ್ಧಿ ಪಡೆದಿದ್ದ 45 ವರ್ಷದ ಅರುಣ್ ಕುಮಾರ್ 1993 ರಲ್ಲಿ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. 2008ರಲ್ಲಿ ಕೊನೆಯ ಬಾರಿಗೆ ಟಿ20 ಕ್ರಿಕೆಟ್ ಆಡಿದ್ದರು. ಅರುಣ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‍ನಲ್ಲಿ 7,208 ರನ್, ಲಿಸ್ಟ್ ‘ಎ’ ಕ್ರಿಕೆಟ್‍ನಲ್ಲೂ 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅರುಣ್ ಕುಮಾರ್, ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ನೀಡಿದ ಬಳಿಕ ರಾಜ್ಯ ತಂಡದ ಪರ ಕೋಚ್ ಆಗಿ ಕೆಲಸ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಹಲವು ಫ್ರಾಂಚೈಸಿಗಳಿಗೆ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

2013-14 ಮತ್ತು 2014-15ರ ಅವಧಿಯಲ್ಲಿ ಸತತ ಎರಡು ಬಾರಿ ಕರ್ನಾಟಕ ತಂಡ ರಣಜಿ ಚಾಂಪಿಯನ್ ಆಗಿತ್ತು. ಈ ವೇಳೆ ಕರ್ನಾಟಕದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ವಿಜಯ್ ಹಜಾರೆ, ಇರಾನಿ ಕಪ್ ಗೆಲ್ಲುವಂತೆ ಮಾಡಿದ್ದರು.

2019-20ರ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‍ನಲ್ಲಿ ಪಾಂಡಿಚೇರಿ ತಂಡದ ಕೋಚ್ ಆಗಿಯೂ ಅರುಣ್ ಕುಮಾರ್ ಕೆಲಸ ಮಾಡಿದರು. ಪ್ಲೇಟ್ ಗ್ರೂಪ್‍ನಲ್ಲಿ ಪಾಂಡಿಚೇರಿ 2ನೇ ಸ್ಥಾನ ಗಳಿಸುವಂತೆ ಮಾಡಿದ್ದರು. ಆದರೆ ಕೇವಲ 2 ಅಂಕಗಳ ಅಂತರದಲ್ಲಿ ಪಾಂಡಿಚೇರಿ ತಂಡ ನಾಕ್‍ಔಟ್ ಪ್ರವೇಶ ತಪ್ಪಿ ಹೋಗಿತ್ತು.

 

Comments

Leave a Reply

Your email address will not be published. Required fields are marked *