ಡ್ಯಾನ್ಸ್ ವರ್ಲ್ಡ್  ಕಪ್‍ನಲ್ಲಿ ಚಿನ್ನ ಗೆದ್ದ ಕನ್ನಡದ ಕಿರುತೆರೆ ನಟಿ

ಬೆಂಗಳೂರು: ಕನ್ನಡದ `ಶ್ರೀ ವಿಷ್ಣು ದಶಾವತಾರ’ ಪೌರಾಣಿಕ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ನಟಿ ನಿಶಾ ಅವರು ಪೋರ್ಚುಗಲ್‍ನ ಬ್ರಾಗಾದಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನಿಶಾ ಅವರು ಶಾಸ್ತ್ರೀಯ ನೃತ್ಯಪಟುವಾಗಿದ್ದು, ತಮ್ಮ ಡ್ಯಾನ್ಸ್ ಪಾರ್ಟನರ್ ಅನಿರುದ್ಧ್ ಜೊತೆಗೆ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜಾನಪದ ಡ್ಯುಯೆಟ್ ರಾಷ್ಟ್ರೀಯ ವಿಭಾಗದಲ್ಲಿ ಈ ಜೋಡಿ ಅಮೋಘ ನೃತ್ಯ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದು ಕರುನಾಡು ಹಾಗೂ ರಾಷ್ಟ್ರದ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.

ಈ ಅಂತಾರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯ ಆಡಿಷನ್‍ಗಾಗಿಯೇ ಸುಮಾರು 20,000 ಮಂದಿ ನೃತ್ಯಪಟುಗಳು ಬಂದಿದ್ದರು. ಅಲ್ಲದೆ ಒಟ್ಟು 13 ವಿವಿಧ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗಿದ್ದು, 51ಕ್ಕೂ ಹೆಚ್ಚು ದೇಶದ ನೃತ್ಯ ಪಟುಗಳು ಭಾಗವಹಿಸಿದ್ದರು.

ಕಠಿಣ ಸ್ಪರ್ಧೆಯ ನಡುವೆ ನಿಶಾ ಹಾಗೂ ಅನಿರುದ್ಧ್ ಚಿನ್ನದ ಪದಕ ಗೆದ್ದು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕನ್ನಡದ ವಿಷ್ಣು ದಶಾವತಾರ ಧಾರಾವಾಹಿ ಮುಗಿದ ಬಳಿಕ ನಿಶಾ ಅವರು ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *