ಬರೆದು ಓದುವ ಭಾಷಣಕ್ಕೆ ಬ್ರೇಕ್ – ಸಚಿವ ಮಾಧುಸ್ವಾಮಿಯಿಂದ ನಾಡ ಧ್ವಜಾರೋಹಣ

ತುಮಕೂರು: ಅಧಿಕಾರಿಗಳು ಬರೆದು ಕೊಟ್ಟ ಭಾಷಣ ಓದುವ ಪದ್ಧತಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬ್ರೇಕ್ ಹಾಕಿದ್ದಾರೆ.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಚಿವ ಮಾಧುಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಮೊದಲು ರಾಷ್ಟ್ರ ಧ್ವಜದ ಬಳಿಕ ನಾಡ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ನಂತರ ಸಚಿವ ಜೆ.ಸಿ.ಮಾಧುಸ್ವಾಮಿ ಭಾಷಣ ಮಾಡಿದರು. ಅಧಿಕಾರಿಗಳು ಬರೆದು ಕೊಡುವ ಭಾಷಣವನ್ನು ಓದದೇ ಸಚಿವರು ಸ್ವತಃ ತಾವೇ ಭಾಷಣವನ್ನು ಮಾಡಿದರು. ಪ್ರತಿ ವರ್ಷ ಅಧಿಕಾರಿಗಳು ಬರೆದು ಕೊಟ್ಟ ಭಾಷಣವನ್ನೇ ಉಸ್ತುವಾರಿ ಸಚಿವರು ಓದುತ್ತಿದ್ದರು. ಆದರೆ ಈ ಪದ್ಧತಿಗೆ ಸಚಿವ ಮಾಧುಸ್ವಾಮಿ ತಿಲಾಂಜಲಿ ಹಾಡಿದ್ದು, ತಾವೇ ಭಾಷಣ ಮಾಡಿ, ತಮ್ಮ ಭಾಷಣದುದ್ದಕೂ ಕನ್ನಡ ನಾಡಿನ ಹಿರಿಮೆಯನ್ನು ಕೊಂಡಾಡಿದರು.

ಸಚಿವರ ಭಾಷಣದ ವೇಳೆಯೇ ಮಹಿಳಾ ಹೋಂ ಗಾರ್ಡ್ ತಲೆ ತಿರುಗಿ ಬಿದ್ದಿದ್ದು, ಬಿಸಿಲಿನಲ್ಲಿ ನಿಂತಿದ್ದಿದ್ದಕ್ಕೆ ಹೋಂ ಗಾರ್ಡ್ ತಲೆಸುತ್ತಿ ಬಿದ್ದರು. ಸ್ಥಳದಲ್ಲಿದ್ದ ಸಿಬ್ಬಂದಿ ಮಹಿಳಾ ಹೋಂ ಗಾರ್ಡ್ ಅವರನ್ನು ಬೇರೆಡೆ ಕರೆದೊಯ್ದು ಚಿಕಿತ್ಸೆ ನೀಡಿದರು.

ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಶುಭಾ ಕಲ್ಯಾಣ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *