ಕನ್ನಡಕ್ಕೆ ಅಪಮಾನ ಮಾಡಿದ ಶಾಲೆಯ ಮಾನ್ಯತೆಯೇ ರದ್ದು- ಸುರೇಶ್ ಕುಮಾರ್ ಖಡಕ್ ನಿರ್ಧಾರ

ಬೆಂಗಳೂರು: ವಿದ್ಯಾರ್ಥಿಗಳು ಶಾಲೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ದಂಡ ವಿಧಿಸುತ್ತಿದ್ದ ಕನ್ನಡ ವಿರೋಧಿ ಖಾಸಗಿ ಶಾಲೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸರಿಯಾದ ಪಾಠ ಕಲಿಸಿದ್ದಾರೆ. ಕನ್ನಡಕ್ಕೆ ಅಪಮಾನ ಮಾಡಿದ ಶಾಲೆಯ ಮಾನ್ಯತೆಯನ್ನೆ ರದ್ದು ಮಾಡುವ ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಕನ್ನಡ ವಿರೋಧಿ ಶಾಲೆಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

ಬೆಂಗಳೂರಿನ ಚೆನ್ನಸಂದ್ರದ ಎಸ್.ಎಲ್.ಎಸ್. ಅಂತರಾಷ್ಟ್ರೀಯ ಗುರುಕುಲ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಶಿಕ್ಷಣ ಹಕ್ಕು ನಿಯಮ, ಕನ್ನಡ ಕಲಿಕಾ ಅಧಿನಿಯಮ ಕಾಯ್ದೆ ಉಲ್ಲಂಘನೆ ಮಾಡಿದ ಶಾಲೆಯ ವಿರುದ್ಧ ತಕ್ಷಣ ನಿಯಮಗಳ ಅನ್ವಯ ಶಾಲೆಯ ಮಾನ್ಯತೆ ರದ್ದು ಮಾಡಲು ಅಗತ್ಯ ಕ್ರಮವಹಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

 

ಏನಿದು ಪ್ರಕರಣ?
ಎಸ್.ಎಲ್.ಎಸ್. ಅಂತಾರಾಷ್ಟ್ರೀಯ ಶಾಲೆ ಕನ್ನಡ ಮಾತನಾಡೋದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ 50 ರೂಪಾಯಿ ದಂಡ ಹಾಗೂ ಎರಡನೇ ಬಾರಿಗೆ ಮಾತನಾಡಿದರೆ 100 ರೂಪಾಯಿ ದಂಡ ಹಾಕುತ್ತಿತ್ತು. ಅಲ್ಲದೆ ಪೋಷಕರಿಗೆ ಮಕ್ಕಳು ಕನ್ನಡ ಮಾತನಾಡದಂತೆ ತಿಳಿಸಲು ಸೂಚನೆಯನ್ನು ನೀಡಿತ್ತು. ಈ ವಿಷಯ ತಿಳಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಶಾಲೆಗೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಪರಿಶೀಲನೆಯಲ್ಲಿ ಕನ್ನಡಕ್ಕೆ ಅಪಮಾನ ಮಾಡಿರೋ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಸಚಿವರಿಗೆ ಶಿಫಾರಸ್ಸು ಮಾಡಿದ್ರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಶಿಫಾರಸ್ಸಿಗೆ ಸ್ಪಂದನೆ ನೀಡಿರೋ ಸಚಿವರು ಕನ್ನಡ ವಿರೋಧಿ ಶಾಲೆಯ ಮಾನ್ಯತೆ ರದ್ದು ಮಾಡೋ ಮಹತ್ವದ ನಿರ್ಧಾರ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *